×
Ad

ಪಾಕ್ ಚುನಾವಣೆಯಲ್ಲಿ ಸಯೀದ್ ಸ್ಪರ್ಧೆ ಸಾಧ್ಯತೆ: ಅಮೆರಿಕ ಕಳವಳ

Update: 2017-12-20 22:02 IST

ವಾಶಿಂಗ್ಟನ್, ಡಿ. 20: ಪಾಕಿಸ್ತಾನದಲ್ಲಿ 2018ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿ ಹಾಗೂ ಜಮಾಅತುದಅವಾ (ಜೆಯುಡಿ) ಮುಖ್ಯಸ್ಥ ಹಫೀಝ್ ಸಯೀದ್ ಸ್ಪರ್ಧಿಸಲಿದ್ದಾನೆ ಎಂಬ ವರದಿಗಳ ಬಗ್ಗೆ ಅಮೆರಿಕ ಕಳವಳಗೊಂಡಿದೆ ಎಂದು ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ 2018ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ತನ್ನ ಸಂಘಟನೆ ಜಮಾಅತುದಅವಾ ‘ಮಿಲಿ ಮುಸ್ಲಿಮ್ ಲೀಗ್’ ಎಂಬ ಹೆಸರಿನಲ್ಲಿ ಸ್ಪರ್ಧಿಸುವುದು ಎಂಬುದಾಗಿ ಲಷ್ಕರ್ ಎ ತೊಯ್ಬಾ ಭಯೋತ್ಪಾದಕ ಸಂಘಟನೆಯ ಸ್ಥಾಪಕನೂ ಆಗಿರುವ ಸಯೀದ್ ಈಗಾಗಲೇ ಪ್ರಕಟಿಸಿರುವುದನ್ನು ಸ್ಮರಿಸಬಹುದಾಗಿದೆ.

ಆದರೆ, ಸಯೀದ್‌ನ ಸಂಘಟನೆಯ ರಾಜಕೀಯ ಘಟಕವಾಗಿರುವ ಮಿಲಿ ಮುಸ್ಲಿಮ್ ಲೀಗ್ ಚುನಾವಣಾ ಆಯೋಗದಲ್ಲಿ ಇನ್ನೂ ನೋಂದಣಿಯಾಗಿಲ್ಲ.

‘‘ನವೆಂಬರ್‌ನಲ್ಲಿ ಗೃಹಬಂಧನದಿಂದ ಬಿಡುಗಡೆಗೊಂಡಿರುವ ಸಯೀದ್ ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿಯಾಗಿದ್ದಾನೆ ಹಾಗೂ ಆತ ಲಷ್ಕರ್ ಎ ತೊಯ್ಬಾ ಭಯೋತ್ಪಾದಕ ಸಂಘಟನೆಯ ನಾಯಕನೂ ಆಗಿದ್ದಾನೆ’’ ಎಂದು ಅಮೆರಿಕದ ವಿದೇಶ ಇಲಾಖೆಯ ವಕ್ತಾರೆ ಹೆದರ್ ನೋವರ್ಟ್ ಹೇಳಿದರು.

‘‘ಹಫೀಝ್ ಸಯೀದ್‌ನ ಸಂಘಟನೆಯನ್ನು ಅಮೆರಿಕ ಸರಕಾರ ಭಯೋತ್ಪಾದಕ ಸಂಘಟನೆ ಎಂಬುದಾಗಿ ಪರಿಗಣಿಸುತ್ತದೆ. ನಾವು ಪಾಕಿಸ್ತಾನ ಸರಕಾರದೊಂದಿಗೆ ಹಲವು ಮಾತುಕತೆಗಳನ್ನು ನಡೆಸಿದ್ದೇವೆ. ಇತ್ತೀಚಿನವರೆಗೂ ಈ ವ್ಯಕ್ತಿಯನ್ನು ಗೃಹಬಂಧನದಲ್ಲಿಡಲಾಗಿತ್ತು. ಈಗ ಪಾಕಿಸ್ತಾನ ಅವನನ್ನು ಬಿಡುಗಡೆ ಮಾಡಿದೆ. ಈಗ, ಆತ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾನೆ ಎಂಬ ಮಾತುಗಳು ಕೇಳಿಬರುತ್ತಿವೆ’’ ಎಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

ಹಫೀಝ್ ತಲೆಗೆ 64 ಕೋಟಿ ರೂ. ಬಹುಮಾನ

ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದಕ್ಕಾಗಿ ಅಮೆರಿಕ ಸರಕಾರ ಹಫೀಝ್ ಸಯೀದ್‌ನ ತಲೆಗೆ 10 ಮಿಲಿಯ ಡಾಲರ್ (ಸುಮಾರು 64 ಕೋಟಿ ರೂಪಾಯಿ) ಬಹುಮಾನ ಘೋಷಿಸಿದೆ.

 ಆತನನ್ನು ಹಿಡಿದುಕೊಟ್ಟವರಿಗೆ ಅಥವಾ ಬಂಧನಕ್ಕೆ ನೆರವಾಗುವ ಮಾಹಿತಿ ನೀಡಿದವರಿಗೆ ಈ ಮೊತ್ತ ಕೊಡಲಾಗುವುದು ಎಂಬುದಾಗಿ ಅಮೆರಿಕದ ವಿದೇಶಾಂಗ ಇಲಾಖೆ ಈಗಾಗಲೇ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News