ಲಿಬಿಯದಿಂದ 10,000 ವಲಸಿಗರ ಸ್ಥಳಾಂತರ: ವಿಶ್ವಸಂಸ್ಥೆ

Update: 2017-12-20 17:16 GMT

ಟ್ರಿಪೋಲಿ (ಲಿಬಿಯ), ಡಿ. 20: ಲಿಬಿಯದ ಬಂಧನ ಕೇಂದ್ರಗಳಲ್ಲಿ ಸಿಕ್ಕಿಹಾಕಿಕೊಂಡು ಅತ್ಯಂತ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿರುವ 10,000 ಅಕ್ರಮ ವಲಸಿಗರನ್ನು ಮುಂದಿನ ವರ್ಷ ಆ ದೇಶದಿಂದ ಬೇರೆಡೆಗೆ ಸ್ಥಳಾಂತರಿಸಲು ವಿಶ್ವಸಂಸ್ಥೆ ಯೋಜಿಸಿದೆ ಎಂದು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಆಫ್ರಿಕದ ವಿವಿಧ ದೇಶಗಳಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಹಿಂಸಾಚಾರಗಳಿಂದ ಬೇಸತ್ತು ಯುರೋಪ್ ದೇಶಗಳಿಗೆ ವಲಸೆ ಹೋಗಲು ನಿರ್ಧರಿಸಿರುವ ನಿರಾಶ್ರಿತರಿಗೆ ಲಿಬಿಯ ಪ್ರಮುಖ ನಿರ್ಗಮನ ದ್ವಾರವಾಗಿದೆ.

ಹಿಂದಿನ ವರ್ಷಗಳಲ್ಲಿ ಲಿಬಿಯದಿಂದ ಇಟಲಿಗೆ ಭಾರೀ ಪ್ರಮಾಣದಲ್ಲಿ ವಲಸಿಗರ ಕಳ್ಳಸಾಗಣೆಯಾಗುತ್ತಿತ್ತು. ಆದರೆ, ಈ ವರ್ಷದ ಜುಲೈ ಬಳಿಕ ಈ ಸಂಖ್ಯೆ ಮೂರನೆ ಎರಡರಷ್ಟು ಕುಸಿದಿದೆ.

ವಿಶ್ವಸಂಸ್ಥೆ ಬೆಂಬಲದ ಲಿಬಿಯ ಸರಕಾರವು ಮಾನವ ಕಳ್ಳಸಾಗಣೆಯ ವಿರುದ್ಧ ಕ್ರಮಗಳನ್ನು ತೆಗೆದುಕೊಂಡಿರುವುದೇ ಇದಕ್ಕೆ ಕಾರಣವಾಗಿದೆ.

ಹಾಗಾಗಿ, ವಲಸಿಗರು ಲಿಬಿಯದ ವಿವಿಧ ಬಂಧನ ಕೇಂದ್ರಗಳಲ್ಲಿ ಅತ್ಯಂತ ಸಂಕಷ್ಟಮಯ ಜೀವನ ನಡೆಸುತ್ತಿದ್ದಾರೆ.

ಈ ಪೈಕಿ, ಸುಮಾರು 10,000 ನಿರಾಶ್ರಿತರನ್ನು ಮುಂದಿನ ವರ್ಷ ಬೇರೆ ದೇಶಗಳಿಗೆ ಸ್ಥಳಾಂತರಿಸಲಾಗುವುದು ಎಂದು ವಿಶ್ವಸಂಸ್ಥೆಯ ನಿರಾಶ್ರಿತ ಘಟಕದ ಮುಖ್ಯಸ್ಥ ರಾಬರ್ಟೊ ಮಿಗ್ನೋನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News