ಸಿರಿಯಾದಲ್ಲಿ ಐಸಿಸ್ ಉಗ್ರರಿಗೆ ಅಮೆರಿಕ ತರಬೇತಿ ನೀಡುತ್ತಿದೆ: ರಷ್ಯಾ ಆರೋಪ

Update: 2017-12-27 16:09 GMT

ನ್ಯೂಯಾರ್ಕ್, ಡಿ.27: ರಷ್ಯಾವನ್ನು ಅಸ್ಥಿರಗೊಳಿಸುವ ಕಾರ್ಯತಂತ್ರದ ಭಾಗವಾಗಿ ಅಮೆರಿಕಾವು ಸಿರಿಯಾದಲ್ಲಿ ಮಾಜಿ ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ತರಬೇತಿ ನೀಡುತ್ತಿದೆ ಎಂದು ರಷ್ಯಾದ ಸೇನಾ ಮುಖ್ಯಸ್ಥರು ಆರೋಪಿಸಿದ್ದಾರೆ.

 ಅಮೆರಿಕಾವು ಸಿರಿಯಾದ ಟನ್ಫ್ ಎಂಬಲ್ಲಿ ಸೇನಾ ನೆಲೆ ಸ್ಥಾಪಿಸಿರುವ ಹಿನ್ನೆಲೆಯಲ್ಲಿ ರಷ್ಯಾದ ಜನರಲ್ ವಲೆರಿ ಗೆರಸಿಮೊವ್ ಈ ಆಪಾದನೆಯನ್ನು ಮಾಡಿದ್ದಾರೆ. ಈ ಸೇನಾನೆಲೆಯನ್ನು ಅಕ್ರಮ ಎಂದು ಕರೆದಿರುವ ರಷ್ಯಾ ಈ ಪ್ರದೇಶದಲ್ಲಿ ಉಗ್ರರು ಯಾವುದೇ ಅಡೆತಡೆಯಿಲ್ಲದೆ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದೆ.

ಈ ವರ್ಷ ಇಸ್ಲಾಮಿಕ್ ಸ್ಟೇಟ್ ಸಿರಿಯಾ ಮತ್ತು ಇರಾಕ್‌ನಲ್ಲಿ ವಶಪಡಿಸಿಕೊಂಡಿದ್ದ ಬಹುತೇಕ ಎಲ್ಲಾ ಪ್ರದೇಶಗಳನ್ನು ಕಳೆದುಕೊಂಡಿದೆ. ಐಸಿಸ್ ಜೊತೆಗಿನ ಯುದ್ಧದ ಪ್ರಮುಖ ಭಾಗ ಮುಗಿದಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗಿ ಲವ್ರೊವ್ ತಿಳಿಸಿರುವುದಾಗಿ ಆರ್‌ಐಎ ನ್ಯೂಸ್ ವರದಿ ಮಾಡಿದೆ. ಈ ಆರೋಪವನ್ನು ತಳ್ಳಿಹಾಕಿರುವ ಅಮೆರಿಕಾ ಟನ್ಫ್‌ನಲ್ಲಿ ಸ್ಥಾಪಿಸಲಾಗಿರುವ ಸೇನಾನೆಲೆ ಒಂದು ತಾತ್ಕಾಲಿಕ ರಚನೆಯಾಗಿದ್ದು, ಐಸಿಸ್ ಉಗ್ರರ ವಿರುದ್ಧ ಹೋರಾಡಲು ಸ್ಥಳೀಯ ಪಡೆಗಳಿಗೆ ತರಬೇತಿ ನಿಡುವ ಸಲುವಾಗಿ ನಿರ್ಮಿಸಲಾಗಿದೆ ಎಂದು ತಿಳಿಸಿದೆ. ಅಮೆರಿಕವು ಇಸ್ಲಾಮಿಕ್ ಸ್ಟೇಟ್ ವಿರುದ್ಧದ ತನ್ನ ಹೋರಾಟಕ್ಕೆ ಬದ್ಧವಾಗಿದೆ ಮತ್ತು ಅದರ ಸುರಕ್ಷಿತ ತಾಣಗಳನ್ನು ಧ್ವಂಸ ಮಾಡುತ್ತಿದೆ ಎಂದು ತಿಳಿಸಿದೆ. ಆದರೆ ರಷ್ಯಾ ಮಾತ್ರ ತನ್ನ ಹೇಳಿಕೆಯಲ್ಲಿ ಸ್ಥಿರವಾಗಿದ್ದು ರಷ್ಯಾದ ಉಪಗ್ರಹಗಳು ಯುಎಸ್ ಸೇನಾನೆಲೆಯಲ್ಲಿ ಉಗ್ರರ ಇರುವಿಕೆಯನ್ನು ಪತ್ತೆಮಾಡಿದೆ. ಅವರಿಗೆ ಅಲ್ಲಿ ತರಬೇತಿ ನೀಡಲಾಗುತ್ತಿದೆ. ಅವರೆಲ್ಲಾ ಮಾಜಿ ಐಸಿಸ್ ಉಗ್ರರಾಗಿದ್ದು, ಈಗ ತಮ್ಮನ್ನು ನ್ಯೂ ಸಿರಿಯನ್ ಆರ್ಮಿ ಮುಂತಾದ ಬೇರೆಬೇರೆ ಹೆಸರುಗಳಿಂದ ಕರೆಸಿಕೊಳ್ಳುತ್ತಾರೆ ಎಂದು ಜನರಲ್ ಗೆರಸಿಮೊವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News