ಎವರೆಸ್ಟ್ ಶಿಖರ ಮರು ಅಳೆಯುವ ಭಾರತದ ಪ್ರಸ್ತಾಪ ತಿರಸ್ಕರಿಸಿದ ನೇಪಾಳ

Update: 2017-12-27 16:56 GMT

ಕಾಠ್ಮಂಡು, ಡಿ.27: 2015ರ ಭೂಕಂಪದ ಹಿನ್ನೆಲೆಯಲ್ಲಿ ಜಗತ್ತಿನ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್‌ನ್ನು ಮರುಅಳೆಯುವ ಭಾರತದ ಪ್ರಸ್ತಾಪವನ್ನು ನೇಪಾಳ ತಿರಸ್ಕರಿಸಿದ್ದು, ತಾನೇ ಖುದ್ದಾಗಿ ಶಿಖರದ ಮರುಅಳತೆ ಮಾಡುವುದಾಗಿ ನೇಪಾಳದ ಸಮೀಕ್ಷೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಈ ಪ್ರಕ್ರಿಯೆಗಾಗಿ ಅಂಕಿಅಂಶಗಳನ್ನು ಪಡೆಯಲು ನೇಪಾಳವು ಭಾರತ ಮತ್ತು ಚೀನಾದ ಸಹಾಯವನ್ನು ಕೋರಲಿದೆ ಎಂದು ಸಮೀಕ್ಷೆ ಇಲಾಖೆಯ ಪ್ರಧಾನ ನಿರ್ದೇಶಕರಾದ ಗಣೇಶ ಭಟ್ಟ ತಿಳಿಸಿದ್ದಾರೆ. ಮೌಂಟ್ ಎವರೆಸ್ಟ್ ಶಿಖರವು ಚೀನಾ-ನೇಪಾಳ ಗಡಿಯಲ್ಲಿರುವ ಕಾರಣ ಭಾರತದ ಪ್ರಸ್ತಾಪವನ್ನು ತಿರಸ್ಕರಿಸುವಂತೆ ನೇಪಾಳಕ್ಕೆ ಚೀನಾ ಸೂಚಿಸಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. 2015ರಲ್ಲಿ ನೇಪಾಳವನ್ನು ಬುಡಮೇಲು ಮಾಡಿದ್ದ ಭೂಕಂಪದಿಂದ ಮೌಂಟ್ ಎವರೆಸ್ಟ್ ಶಿಖರದ ಎತ್ತರದ ಬಗ್ಗೆ ವೈಜ್ಞಾನಿಕ ಸಮುದಾಯದಲ್ಲಿ ಹಲವು ಸಂಶಯಗಳು ಎದ್ದಿದ್ದವು ಎಂದು ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ. 2015ರ ಎಪ್ರಿಲ್‌ನಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪದಲ್ಲಿ ಎಂಟು ಸಾವಿರ ಮಂದಿ ಸಾವನ್ನಪ್ಪಿದ್ದರೆ, ಲಕ್ಷಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದರು. ಭಾರತದ 250 ವರ್ಷ ಹಳೆಯ ಸರ್ವೇಕ್ಷಣಾ ಸಂಸ್ಥೆ ಸರ್ವೆ ಆಫ್ ಇಂಡಿಯಾವು ಭಾರತ ಮತ್ತು ನೇಪಾಳ ಜಂಟಿಯಾಗಿ ಮೌಂಟ್ ಎವರೆಸ್ಟ್‌ನ ಮರುಅಳತೆ ಮಾಡಬೇಕು ಎಂದು ಸಲಹೆ ನೀಡಿತ್ತು. ಆದರೆ ಈ ಪ್ರಸ್ತಾಪಕ್ಕೆ ನೇಪಾಳ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News