ಶಾಂತಿ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ತಾಲಿಬಾನ್‌ಗೆ ಚೀನಾ, ಪಾಕಿಸ್ತಾನ, ಅಫ್ಘಾನಿಸ್ತಾನ ಮನವಿ

Update: 2017-12-27 17:07 GMT

ಇಸ್ಲಾಮಾಬಾದ್, ಡಿ.27: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮಧ್ಯೆ ಇರುವ ಘರ್ಷಣೆಯಿಂದ ಕೂಡಿದ ಸಂಬಂಧವನ್ನು ಹಸನುಗೊಳಿಸುವ ಪ್ರಯತ್ನವಾಗಿ ಚೀನಾ ಎರಡು ದೇಶಗಳ ವಿದೇಶಾಂಗ ಸಚಿವರ ಮಾತುಕತೆಗೆ ವೇದಿಕೆಯನ್ನು ಒದಗಿಸಿತು.

ಈ ಸಭೆಯಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ, ಅಪ್ಘಾನಿಸ್ತಾನ ವಿದೇಶಾಂಗ ಸಚಿವ ಸಲಾಹುದ್ದೀನ್ ರಬ್ಬಾನಿ ಮತ್ತು ಪಾಕಿಸ್ತಾನದ ವಿದೇಶ ಸಚಿವ ಖ್ವಾಜಾ ಆಸಿಫ್ ಉಪಸ್ಥಿತರಿದ್ದರು. ಈ ವೇಳೆ ಮೂರು ದೇಶಗಳ ಪ್ರತಿನಿಧಿಗಳು ಭಯೋತ್ಪಾದನೆ ನಿಗ್ರಹದ ಬಗ್ಗೆ ಪರಸ್ಪರ ಸಮನ್ವಯ ಮತ್ತು ಸಹಕಾರವನ್ನು ಮತ್ತಷ್ಟು ಬಲಗೊಳಿಸಲು ಒಪ್ಪಿದವು ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ. ಆದಷ್ಟು ಬೇಗ ಶಾಂತಿ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು ಎಂದು ಈ ವೇಳೆ ಮೂರೂ ದೇಶಗಳು ತಾಲಿಬಾನ್‌ನನ್ನು ಮನವಿ ಮಾಡಿದರು. ಅಫ್ಘಾನ್ ನೇತೃತ್ವದ ಶಾಂತಿ ಮತ್ತು ಸಮನ್ವಯ ಪ್ರಕ್ರಿಯೆಯು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಹಿಂಸಾಚಾರ ಕೊನೆಗೊಳಿಸಲು ಅತ್ಯಂತ ಪರಿಣಾಮಕಾರಿ ಮಾರ್ಗ ಎಂದೇ ತಿಳಿಯಲಾಗಿದ್ದು, ಪ್ರಾದೇಶಿಕವಾಗಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಬೆಂಬಲ ಪಡೆದಿದೆ.

ಸಭೆಯ ಬಳಿಕ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, ಯಾವುದೇ ದೇಶ, ಸಂಸ್ಥೆ ಅಥವಾ ವ್ಯಕ್ತಿ ತಮ್ಮ ದೇಶದ ಭೂಮಿಯನ್ನು ಇತರ ದೇಶದ ವಿರುದ್ಧ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಉಪಯೋಗಿಸದಂತೆ ನೋಡಿಕೊಳ್ಳಲು ಕಟಿಬದ್ಧವಾಗಿದ್ದೇವೆ ಎಂದು ಮೂರು ದೇಶಗಳ ಪ್ರತಿನಿಧಿಗಳು ತಿಳಿಸಿದ್ದಾರೆ.

ಚೀನಾವು ಬಹುಕೋಟಿ ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆ ಮತ್ತು ವನ್ ಬೆಲ್ಟ್ ವನ್ ರೋಡ್ ಯೋಜನೆಯಲ್ಲಿ ಬೃಹತ್ ಮೊತ್ತದ ಬಂಡವಾಳ ಹೂಡಿದ್ದು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮಧ್ಯೆ ಸಂಬಂಧದಲ್ಲಿ ಇರುವ ಬಿರುಕಿನ ಕಾರಣದಿಂದ ಚಿಂತೆಗೀಡಾಗಿದೆ. ಇದೇ ಕಾರಣದಿಂದ ಎರಡು ದೇಶಗಳ ಮಧ್ಯೆ ಸ್ನೇಹವನ್ನು ಹೆಚ್ಚಿಸಲು ಅದು ಪ್ರಯತ್ನಿಸುತ್ತಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News