ಒಂದೇ ಎಸೆತದಲ್ಲಿ 11 ರನ್ ಕೊಟ್ಟು ತಂಡವನ್ನು ಸೋಲಿಸಿದ ಬೌಲರ್!
ಸಿಡ್ನಿ, ಜ.2: ಬಿಗ್ ಬ್ಯಾಶ್ ಟ್ವೆಂಟಿ-20 ಲೀಗ್ ಪಂದ್ಯದ ಕೊನೆಯ ಓವರ್‌ನ ಒಂದೇ ಎಸೆತದಲ್ಲಿ 11 ರನ್ ಬಿಟ್ಟುಕೊಟ್ಟ ಸಿಡ್ನಿ ಸಿಕ್ಸರ್ ತಂಡದ ಬೌಲರ್ ಸೀನ್ ಅಬಾಟ್ ಪರ್ತ್ ಸ್ಕಾಚರ್ಸ್ ತಂಡ ರೋಚಕ ಗೆಲುವು ಸಾಧಿಸಲು ನೆರವಾಗಿದ್ದಾರೆ.
ಗೆಲ್ಲಲು 168 ರನ್ ಗುರಿ ಪಡೆದ ಸ್ಕಾಚರ್ಸ್ ತಂಡ ಮೈಕಲ್ ಕ್ಲಿಂಜರ್ ಅರ್ಧಶತಕದ(61 ಎಸೆತ, 83 ರನ್)ಬೆಂಬಲದಿಂದ ಇನ್ನೂ ಐದು ಎಸೆತಗಳು ಬಾಕಿ ಇರುವಾಗಲೇ 6 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿತು. ಬಿಗ್‌ಬಾಶ್ ಲೀಗ್‌ನಲ್ಲಿ ಸತತ 4 ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯಿತು.
ಪರ್ತ್ ತಂಡ 159 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದು, ಅಂತಿಮ ಓವರ್‌ನಲ್ಲಿ ಗೆಲ್ಲಲು 9 ರನ್ ಅಗತ್ಯವಿತ್ತು. ಆದರೆ, ಅಬಾಟ್ ಅವರ ಎರಡು ಫುಲ್‌ಟಾಸ್ ಎಸೆತಗಳು ಸಿಡ್ನಿಯ ಗೆಲುವಿನ ಅವಕಾಶ ಕಸಿದುಕೊಂಡವು.
ಅಬಾಟ್ ಅವರ 20ನೇ ಓವರ್‌ನ ಮೊದಲ ಎಸೆತ ವೈಡ್ ಆಗಿತ್ತು. ಚೆಂಡು ಲೆಗ್‌ಸೈಡ್‌ನಲ್ಲಿ ವಿಕೆಟ್‌ಕೀಪರ್ ನೆವಿಲ್‌ರನ್ನು ವಂಚಿಸಿ ಬೌಂಡರಿ ಗೆರೆ ದಾಟಿತು. ಅಬಾಟ್ ಎಸೆದ ಎರಡನೇ ಎಸೆತವನ್ನು ವಿಕೆಟ್‌ಕೀಪರ್ ತಲೆ ಮೇಲಿಂದ ಸಿಕ್ಸರ್‌ಗೆ ಅಟ್ಟಿದ ಆ್ಯಡಮ್ ವೋಗ್ಸ್ ವಾಕಾ ಸ್ಟೇಡಿಯಂನಲ್ಲಿ ಗರಿಷ್ಠ ಸ್ಕೋರನ್ನು ಯಶಸ್ವಿಯಾಗಿ ಬೆನ್ನಟ್ಟಲು ಕಾರಣರಾದರು.
ಇದಕ್ಕೆ ಮೊದಲು ಸಿಕ್ಸರ್ ತಂಡ 4 ವಿಕೆಟ್‌ಗಳ ನಷ್ಟಕ್ಕೆ 167 ರನ್ ಗಳಿಸಿತ್ತು.