ಮೊದಲ ಟೆಸ್ಟ್‌ಗೆ ಧವನ್ ಲಭ್ಯ, ಜಡೇಜ ಹೊರಕ್ಕೆ

Update: 2018-01-03 18:58 GMT

ಕೇಪ್‌ಟೌನ್, ಜ.3: ಭಾರತ ಮತ್ತು ದಕ್ಷಿಣ ಆಫ್ರಿಕ ತಂಡಗಳ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಶುಕ್ರವಾರ ಕೇಪ್‌ಟೌನ್‌ನಲ್ಲಿ ಆರಂಭವಾಗಲಿದ್ದು, ಆಲ್‌ರೌಂಡರ್ ರವೀಂದ್ರ ಜಡೇಜ ಜ್ವರದ ಕಾರಣದಿಂದಾಗಿ ತಂಡದಿಂದ ಹೊರಗುಳಿಯಲಿದ್ದಾರೆ. ಗಾಯಗೊಂಡಿರುವ ಅಗ್ರ ಕ್ರಮಾಂಕದ ದಾಂಡಿಗ ಚೇತೇಶ್ವರ ಪೂಜಾರ ಚೇತರಿಸಿಕೊಂಡಿದ್ದು, ಅವರು ಮೊದಲ ಟೆಸ್ಟ್‌ಗೆ ಲಭ್ಯರಿದ್ದಾರೆ.

ಧವನ್ ಮೊದಲ ಟೆಸ್ಟ್‌ಗೆ ಆಡಲು ಲಭ್ಯರಿರುವುದಾಗಿ ಬಿಸಿಸಿಐ ಮೂಲಗಳು ತಿಳಿಸಿವೆ.

ಜಡೇಜ ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದಾರೆ. ಈ ಕಾರಣದಿಂದಾಗಿ ಜಡೇಜ ತಂಡದಿಂದ ಹೊರಗುಳಿಯುವಂತಾಗಿದೆ. ಇದರಿಂದಾಗಿ ತಂಡಕ್ಕೆ ಹಿನ್ನಡೆಯಾಗಿದೆ. ಕಳೆದ ವರ್ಷ ಭಾರತ ಟೆಸ್ಟ್, ಏಕದಿನ ಮತ್ತು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿತ್ತು. ಆದರೆ ಈ ವರ್ಷದ ಸರಣಿ ಭಿನ್ನವಾಗಿದೆ. ತಂಡದ ನೈಜ ಶಕ್ತಿ, ಸಾಮರ್ಥ್ಯ ಅನಾವರಣಗೊಳ್ಳಲಿದೆ.

ದಕ್ಷಿಣ ಆಫ್ರಿಕ ತಂಡ ತವರಿನಲ್ಲಿ ಇತರ ತಂಡಗಳಿಗಿಂತ ಹೆಚ್ಚು ಬಲಿಷ್ಠವಾಗಿದೆ. ತಂಡಕ್ಕೆ ಗೆಲುವು ತಂದು ಕೊಡಬಲ್ಲ ಬೌಲರ್‌ಗಳಿದ್ದಾರೆ. ಈ ಕಾರಣದಿಂದಾಗಿ ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್‌ಗಳಿಗೆ ಸವಾಲು ಎದುರಾಗಲಿದೆ. ಮೊರ್ನೆ ಮೊರ್ಕೆಲ್,ರಬಾಡ , ವೆರ್ನಾನ್ ಫಿಲ್ಯಾಂಡರ್ ತವರಿನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ.

 ದಕ್ಷಿಣ ಆಫ್ರಿಕ ಪ್ರವಾಸ ಕೈಗೊಂಡಿರುವ ಭಾರತದ ವೇಗಿಗಳ ಪೈಕಿ ಈ ತನಕ ಮುಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ ಮಾತ್ರ ಅಲ್ಲಿ ಆಡಿರುವ ಅನುಭವ ಹೊಂದಿದ್ದಾರೆ. ಭುವನೇಶ್ವರ ಕುಮಾರ್, ಉಮೇಶ್ ಯಾದವ್, ಮತ್ತು ಹಾರ್ದಿಕ್ ಪಾಂಡ್ಯ ಇದೇ ಮೊದಲ ಬಾರಿ ಪ್ರವಾಸ ಕೈಗೊಂಡಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿರಲಿಲ್ಲ. ದಕ್ಷಿಣ ಆಫ್ರಿಕ ವಿರುದ್ಧದ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಪಾಂಡ್ಯ ಅವರು ತಂಡಕ್ಕೆ ವಾಪಸಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News