ಶ್ರೀಲಂಕಾ ಕ್ರಿಕೆಟ್ ದಂತಕತೆ ಜಯಸೂರ್ಯಗೆ ಈಗ ನಡೆದಾಡಲು ಊರುಗೋಲೇ ಆಸರೆ!
ಕೊಲಂಬೊ, ಜ.6: ಶ್ರೀಲಂಕಾದ ಓರ್ವ ಆಲ್‌ರೌಂಡ್ ದಂತಕತೆ ಸನತ್ ಜಯಸೂರ್ಯ ಹಿಂದೊಮ್ಮೆ ಸ್ಫೋಟಕ ಬ್ಯಾಟಿಂಗ್ ಹಾಗೂ ಕರಾರುವಾಕ್ ಸ್ಪಿನ್ ಬೌಲಿಂಗ್‌ನ ಮೂಲಕ ವಿಶ್ವದ ಆಟಗಾರರನ್ನು ಕಾಡಿದ್ದರು. ಇದೀಗ ಅವರು ನಡೆದಾಡಲು ಪರದಾಟ ನಡೆಸುತ್ತಿದ್ದು, ಓಡಾಡಲು ಊರುಗೋಲು ಆಶ್ರಯಿಸಿದ್ದಾರೆ.
ವಿಶ್ವದ ಅಪಾಯಕಾರಿ ಬ್ಯಾಟ್ಸ್‌ಮನ್ ಆಗಿ ಮಿಂಚಿದ್ದ ಜಯಸೂರ್ಯ ಪ್ರಸ್ತುತ ಮಂಡಿನೋವಿನಿಂದ ಬಳಲುತ್ತಿದ್ದು, ಊರುಗೋಲಿಲ್ಲದೆ ನಡೆದಾಡಲು ಸಾಧ್ಯವಾಗುತ್ತಿಲ್ಲ. 48ರ ಹರೆಯದ ಜಯಸೂರ್ಯ ನಿವೃತ್ತಿಯ ಜೀವನ ಕಷ್ಟಕರವಾಗಿದೆ.
ಜಯಸೂರ್ಯ 1996ರಲ್ಲಿ ಶ್ರೀಲಂಕಾ ತಂಡ ಚೊಚ್ಚಲ ವಿಶ್ವಕಪ್ ಜಯಿಸಲು ಪ್ರಮುಖ ಪಾತ್ರವಹಿಸಿದ್ದರು. ಕಳೆದ ಕೆಲವು ಸಮಯದಿಂದ ಮಂಡಿನೋವು ಎದುರಿಸುತ್ತಿರುವ ಅವರು ವಿಶೇಷ ಶಸ್ತ್ರಚಿಕಿತ್ಸೆಗಾಗಿ ಆಸ್ಟ್ರೇಲಿಯದ ಮೆಲ್ಬೋರ್ನ್‌ಗೆ ತೆರಳಲಿದ್ದಾರೆ.
2 ದಶಕಗಳ ಕಾಲ ಶ್ರೀಲಂಕಾ ತಂಡದಲ್ಲಿ ಆಡಿದ್ದ ಜಯಸೂರ್ಯ 110 ಟೆಸ್ಟ್, 445 ಏಕದಿನ ಹಾಗೂ 31 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 28 ಶತಕ ಹಾಗೂ 68 ಅರ್ಧಶತಕಗಳಿರುವ ಒಟ್ಟು 13,364 ರನ್ ಗಳಿಸಿರುವ ಜಯಸೂರ್ಯ ಶ್ರೀಲಂಕಾದ ಪರ ಗರಿಷ್ಠ ರನ್ ಗಳಿಸಿರುವ ಎರಡನೇ ಆಟಗಾರನಾಗಿದ್ದಾರೆ.
ವೃತ್ತಿಜೀವನದ ಕೊನೆಯಲ್ಲಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಮಿಂಚಿದ್ದ ಅವರು 31 ಟ್ವೆಂಟಿ-20 ಕ್ರಿಕೆಟ್‌ನಲ್ಲಿ 4 ಅರ್ಧಶತಕಗಳಿರುವ ಒಟ್ಟು 629 ರನ್ ಗಳಿಸಿದ್ದರು. ಐಪಿಎಲ್‌ನ ಮುಂಬೈ ಇಂಡಿಯನ್ಸ್‌ನಲ್ಲಿ ಸಚಿನ್ ತೆಂಡುಲ್ಕರ್ ಹಾಗೂ ಶಾನ್ ಪೊಲ್ಲಾಕ್‌ರೊಂದಿಗೆ ಆಡಿದ್ದರು. ಮೊದಲ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ವಿರುದ್ಧ ಶತಕವನ್ನು ಸಿಡಿಸಿದ್ದರು.
ಉತ್ತಮ ಎಡಗೈ ಸ್ಪಿನ್ ಬೌಲರ್ ಆಗಿರುವ ಜಯಸೂರ್ಯ ಏಕದಿನ ಕ್ರಿಕೆಟ್‌ನಲ್ಲಿ 323 ವಿಕೆಟ್, ಟೆಸ್ಟ್‌ನಲ್ಲಿ 98 ಹಾಗೂ ಟ್ವೆಂಟಿ-20ಯಲ್ಲಿ 20 ವಿಕೆಟ್‌ಗಳನ್ನು ಉರುಳಿಸಿದ ಸಾಧನೆ ಮಾಡಿದ್ದಾರೆ.
ಜಯಸೂರ್ಯ 1999ರಿಂದ 2003ರ ತನಕ ಶ್ರೀಲಂಕಾದ ನಾಯಕನಾಗಿದ್ದರು. 2003ರಲ್ಲಿ ಶ್ರೀಲಂಕಾ ವಿಶ್ವಕಪ್‌ನಿಂದ ಬೇಗನೇ ಹೊರ ನಡೆದ ಕಾರಣ ರಾಜೀನಾಮೆ ನೀಡಿದ್ದರು. 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು.