ಡಾನ್ ಬ್ರಾಡ್ಮನ್ ದಾಖಲೆ ಮುರಿದ ಅಫ್ಘಾನ್ ಆಟಗಾರ

Update: 2018-01-10 16:10 GMT

ಹೊಸದಿಲ್ಲಿ, ಜ.10: ಅಫ್ಘಾನಿಸ್ತಾನದ ಯುವ ಕ್ರಿಕೆಟಿಗ ಬಶೀರ್ ಶಾ ಕ್ರಿಕೆಟ್ ಇತಿಹಾಸದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. 18ರ ಹರೆಯದ ಶಾ 121.77ರ ಸರಾಸರಿಯಲ್ಲಿ 12 ಇನಿಂಗ್ಸ್‌ಗಳಲ್ಲಿ 1,096 ರನ್ ಗಳಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯ ಕ್ರಿಕೆಟ್ ದಂತಕತೆ ಸರ್ ಡಾನ್ ಬ್ರಾಡ್ಮನ್ ಅವರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿನ ಬ್ಯಾಟಿಂಗ್ ಸರಾಸರಿ(95.14)ಯನ್ನು ಮುರಿದಿದ್ದಾರೆ.

ಸ್ಪೀನ್ ಘನ್ ರೀಜನ್ ಪರ ಚೊಚ್ಚಲ ಪಂದ್ಯ ಆಡಿದ್ದ ಅವರು ಅಮೊ ರೀಜನ್ ತಂಡದ ವಿರುದ್ಧ ಔಟಾಗದೆ 256 ರನ್ ಗಳಿಸಿದ್ದರು. ಇದು ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ 2ನೇ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಭಾರತದ ಮಾಜಿ ಕ್ರಿಕೆಟಿಗ ಅಮೋಲ್ ಮುಝುಂದಾರ್ ಗರಿಷ್ಠ ವೈಯಕ್ತಿಕ ಸ್ಕೋರ್(260) ದಾಖಲಿಸಿದ್ದಾರೆ.

ಒಂದು ವರ್ಷ ಹಾಗೂ 2 ತಿಂಗಳ ವೃತ್ತಿಜೀವನದಲ್ಲಿ ಶಾ ಈಗಾಗಲೇ 5 ಶತಕ ಹಾಗೂ 2 ಅರ್ಧಶತಕಗಳನ್ನು ಸಿಡಿಸಿದ್ದಾರೆ.

 ‘‘ಇದು ನನ್ನ ಪಾಲಿಗೆ ಮರೆಯಲಾರದ ಕ್ಷಣ. ನಾನು 2 ದಿನಗಳ ಕಾಲ ಕ್ರೀಸ್‌ನಲ್ಲಿದ್ದು ಬ್ಯಾಟಿಂಗ್ ಮಾಡಿದ್ದೆ. ಟೂರ್ನಿಗೆ ಮೊದಲು ಫಿಟ್‌ನೆಸ್‌ನತ್ತ ಗಮನ ನೀಡಿದ್ದೆ’’ ಎಂದು ಶಾ ಹೇಳಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್ ಶಾ ಪ್ರಸ್ತುತ ಅಫ್ಘಾನಿಸ್ತಾನದ ಅಂಡರ್-19 ಕ್ರಿಕೆಟ್ ತಂಡದೊಂದಿಗೆ ವಿಶ್ವಕಪ್ ಆಡಲು ನ್ಯೂಝಿಲೆಂಡ್‌ನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News