ಟೆಸ್ಟ್‌ನಲ್ಲಿ 100ನೇ ಮೈಲುಗಲ್ಲನ್ನು ತಲುಪಿದ ಶಮಿ

Update: 2018-01-14 12:53 GMT

ಸೆಂಚೂರಿಯನ್, ಜ.14: ದಕ್ಷಿಣ ಆಫ್ರಿಕ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್‌ನ ಎರಡನೇ ದಿನವಾಗಿರುವ ರವಿವಾರ ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 100ನೇ ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದಾರೆ.

ಸೂಪರ್ ಪಾರ್ಕ್ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕದ ಕೇಶವ್ ಮಹಾರಾಜ್ ಅವರ ವಿಕೆಟ್ ಕಬಳಿಸಿದ ಶಮಿ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 100ನೇ ಮೈಲುಗಲ್ಲನ್ನು ತಲುಪಿದರು.

27ರ ಹರೆಯದ ಶಮಿ ಅವರು ಕೇಪ್‌ಟೌನ್‌ನಲ್ಲಿ ಕಳೆದ ಟೆಸ್ಟ್‌ನಲ್ಲಿ 97, 98 ಮತ್ತು 99ನೇ ವಿಕೆಟ್ ಪಡೆದಿದ್ದರು.

  ಶಮಿ ಅವರು ತನ್ನ ತವರಿನ ಕ್ರೀಡಾಂಗಣವಾಗಿರುವ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ 2013 ನವೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ನಲ್ಲಿ ಆಡುವ ಮೂಲಕ ಟೆಸ್ಟ್ ಕ್ರಿಕೆಟ್ ಪ್ರವೇಶಿಸಿದ್ದರು.

 ಶಮಿ ಇದೀಗ 29ನೇ ಟೆಸ್ಟ್‌ನಲ್ಲಿ 100ನೇ ವಿಕೆಟ್ ಪಡೆದಿದ್ದಾರೆ. ಇದರೊಂದಿಗೆ 29 ಟೆಸ್ಟ್‌ಗಳಲ್ಲಿ 100 ವಿಕೆಟ್ ಪಡೆದ ಭಾರತದ ಬೌಲರ್‌ಗಳಾದ ಬಿಷನ್ ಸಿಂಗ್ ಬೇಡಿ, ದಿಲೀಪ್ ದೋಷಿ ಮತ್ತು ಇರ್ಫಾನ್ ಪಠಾಣ್ ಸಾಧನೆಯನ್ನು ಸರಿಗಟ್ಟಿದ್ದಾರೆ.

 ಶಮಿ ಈ ಸಾಧನೆ ಮಾಡಿರುವ ಭಾರತದ 7ನೇ ಮತ್ತು ವಿಶ್ವದ 20ನೇ ವೇಗದ ಬೌಲರ್ ಎನಿಸಿಕೊಂಡಿದ್ದಾರೆ.

ಈ ಸಾಧನೆ ಮಾಡಿದ ಭಾರತದ ವೇಗದ ಬೌಲರ್‌ಗಳಾದ ಕಪಿಲ್ ದೇವ್, ಝಹೀರ್ ಖಾನ್, ಜಾವಗಲ್ ಶ್ರೀನಾಥ್, ಇಶಾಂತ್ ಶರ್ಮಾ, ಕರ್ಸನ್ ಘಾವ್ರಿ ಮತ್ತು ಇರ್ಫಾನ್ ಪಠಾಣ್ ಸಾಲಿಗೆ ಶಮಿ ಸೇರ್ಪಡೆಗೊಂಡಿದ್ದಾರೆ.

 ಶಮಿ ಅವರ ತಂಡದ ಬೌಲರ್ ರವಿಚಂದ್ರನ್ ಅಶ್ವಿನ್ ವೇಗವಾಗಿ 100 ವಿಕೆಟ್‌ಗಳನ್ನು ಪಡೆದು ದಾಖಲೆ ನಿರ್ಮಿಸಿದ್ದರು. ಅವರು ಕೇವಲ 18 ಟೆಸ್ಟ್‌ಗಳಲ್ಲಿ ಈ ಸಾಧನೆ ಮಾಡಿದ್ದರು.

ಏರಪಲ್ಲಿ ಪ್ರಸನ್ನ 20 ಟೆಸ್ಟ್‌ಗಳಲ್ಲಿ, ಅನಿಲ್ ಕುಂಬ್ಳೆ 21, ಶುಭಾಷ್ ಗುಪ್ಟೆ , ಬಿ.ಎಸ್. ಚಂದ್ರಶೇಖರ್ ಮತ್ತು ಪ್ರಗ್ಯಾನ್ ಓಜಾ 22 ಟೆಸ್ಟ್‌ಗಳಲ್ಲಿ, ವಿನೋದ್ ಮಂಕಡ್ 23 ಮತ್ತು ಹರ್ಭಜನ್ ಸಿಂಗ್ 25 ಟೆಸ್ಟ್‌ಗಳಲ್ಲಿ 100 ವಿಕೆಟ್ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News