ದ್ವಿತೀಯ ಟೆಸ್ಟ್ : ಭಾರತದ ಗೆಲುವಿಗೆ 287 ರನ್‌ಗಳ ಸವಾಲು
ಸೆಂಚೂರಿಯನ್, ಜ.16: ಇಲ್ಲಿನ ಸೂಪರ್‌ಸ್ಪೋರ್ಟ್ಸ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದ್ವಿತೀಯ ಕ್ರಿಕೆಟ್ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಟೀಮ್ ಇಂಡಿಯಾ ಗೆಲುವಿಗೆ 287 ರನ್‌ಗಳ ಸವಾಲು ಪಡೆದಿದೆ.
ಟೆಸ್ಟ್‌ನ ನಾಲ್ಕನೇ ದಿನವಾಗಿರುವ ಮಂಗಳವಾರ ದಕ್ಷಿಣ ಆಫ್ರಿಕ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 91.3 ಓವರ್‌ಗಳಲ್ಲಿ 258 ರನ್‌ಗಳಿಗೆ ಆಲೌಟಾಗಿದೆ.
ಭಾರತದ ವೇಗಿ ಮುಹಮ್ಮದ್ ಶಮಿ(49ಕ್ಕೆ 4), ಜಸ್‌ಪ್ರೀತ್ ಬುಮ್ರಾ(70ಕ್ಕೆ 3), ಇಶಾಂತ್ ಶರ್ಮಾ(40ಕ್ಕೆ 2) ಮತ್ತು ಆರ್.ಅಶ್ವಿನ್(78ಕ್ಕೆ 1) ದಾಳಿಗೆ ಸಿಲುಕಿದ ದಕ್ಷಿಣ ಆಫ್ರಿಕ ಎರಡನೇ ಇನಿಂಗ್ಸ್‌ನ್ನು ಬೇಗನೇ ಮುಗಿಸಿದೆ.
ಮೂರನೇ ದಿನದಾಟದಂತ್ಯಕ್ಕೆ ದಕ್ಷಿಣ ಆಫ್ರಿಕ ದ್ವಿತೀಯ ಇನಿಂಗ್ಸ್‌ನಲ್ಲಿ 29 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 90 ರನ್ ಗಳಿಸಿತ್ತು. 50 ರನ್ ಗಳಿಸಿರುವ ಎಬಿ ಡಿವಿಲಿಯರ್ಸ್ ಮತ್ತು 36 ರನ್ ಗಳಿಸಿರುವ ಡೀನ್ ಎಲ್ಗರ್ ಔಟಾಗದೆ ಕ್ರೀಸ್‌ನಲ್ಲಿದ್ದರು. ದಕ್ಷಿಣ ಆಫ್ರಿಕ ನಾಲ್ಕನೇ ದಿನ ಆಟ ಮುಂದುವರಿಸಿ ನಿನ್ನೆಯ ಮೊತ್ತಕ್ಕೆ 168 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ. ಆರಂಭಿಕ ದಾಂಡಿಗ ಡೀನ್ ಎಲ್ಗರ್ (61) ಮತ್ತು ಎಬಿ ಡಿವಿಲಿಯರ್ಸ್ (80) ಅರ್ಧಶತಕ ದಾಖಲಿಸಿದರು. ನಾಯಕ ಎಫ್ ಡು ಪ್ಲೆಸಿಸ್ (48) ಅರ್ಧಶತಕ ದಾಖಲಿಸುವಲ್ಲಿ ಎಡವಿದರು.
ವೆರ್ನಾನ್ ಫಿಲ್ಯಾಂಡರ್ (26), ಮೊರ್ನೆ ಮೊರ್ಕೆಲ್ (ಔಟಾಗದೆ 10), ಕ್ವಿಂಟನ್ ಡಿ ಕಾಕ್ (12) ಎರಡಂಕೆಯ ಕೊಡುಗೆ ನೀಡಿದರು. ದಕ್ಷಿಣ ಆಫ್ರಿಕ ಮೊದಲ ಇನಿಂಗ್ಸ್‌ನಲ್ಲಿ ಭಾರತದ ವಿರುದ್ಧ 28 ರನ್‌ಗಳ ಮುನ್ನಡೆ ಗಳಿಸಿತ್ತು. ಮೊದಲ ಇನಿಂಗ್ಸ್‌ನಲ್ಲಿ ಭಾರತ 307 ರನ್ ಗಳಿಸಿತ್ತು ಮತ್ತು ದಕ್ಷಿಣ ಆಫ್ರಿಕ 335 ರನ್ ಗಳಿಸಿತ್ತು.