ಇರಾಕ್, ಸಿರಿಯಾ: ಅಮೆರಿಕದ ದಾಳಿಯಿಂದ ಹತರಾದ ನಾಗರಿಕರ ಸಂಖ್ಯೆ 3 ಪಟ್ಟು ಹೆಚ್ಚಳ
ಬಗ್ದಾದ್, ಜ. 20: ಇರಾಕ್ ಮತ್ತು ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿರುವ ಅಮೆರಿಕ ನೇತೃತ್ವದ ಮಿತ್ರಕೂಟದ ದಾಳಿಗಳಿಂದ ಹತರಾಗಿರುವ ನಾಗರಿಕರ ಸಂಖ್ಯೆ 2017ರಲ್ಲಿ ಮೂರು ಪಟ್ಟಾಗಿದೆ ಎಂದು ನಿಗಾ ಸಂಸ್ಥೆಯೊಂದು ಹೇಳಿದೆ.
ಎರಡು ದೇಶಗಳಲ್ಲಿ 3,923ರಿಂದ 6,102 ನಾಗರಿಕರು ಮೃತಪಟ್ಟಿದ್ದಾರೆ ಎಂದು ಲಂಡನ್‌ನಲ್ಲಿರುವ ಪತ್ರಕರ್ತರ ಸಂಘಟನೆ ‘ಏರ್‌ವಾರ್ಸ್’ ಹೇಳಿದೆ.
ಅದರ ಹಿಂದಿನ ವರ್ಷ ಈ ಎರಡು ದೇಶಗಳಲ್ಲಿ ನಡೆದ ನಾಗರಿಕ ಸಾವಿನ ಪ್ರಮಾಣ 1,243ರಿಂದ 1,904 ಆಗಿತ್ತು.
ಇರಾಕ್‌ನ 2ನೆ ಅತಿದೊಡ್ಡ ನಗರ ಮೊಸುಲ್‌ನಿಂದ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರನ್ನು ಹೊರಗಟ್ಟುವ ಹೋರಾಟದಲ್ಲಿ ಅಮೆರಿಕ ನೇತೃತ್ವದ ಮಿತ್ರಕೂಟ ಇರಾಕ್ ಪಡೆಗಳಿಗೆ ನೆರವು ನೀಡಿತ್ತು.
ಇರಾಕ್‌ನಲ್ಲಿ 13 ಲಕ್ಷ ಮಕ್ಕಳು ನಿರ್ವಸಿತ
ಜಿನೇವ (ಸ್ವಿಟ್ಸರ್‌ಲ್ಯಾಂಡ್), ಜ. 20: ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪಿನ ಜೊತೆಗೆ ನಡೆದ ಮೂರು ವರ್ಷಗಳ ಅವಧಿಯ ಯುದ್ಧದಲ್ಲಿ ನಿರ್ವಸಿತರಾದ 26 ಲಕ್ಷ ಜನರ ಪೈಕಿ ಅರ್ಧದಷ್ಟು ಭಾಗ ಮಕ್ಕಳು ಎಂದು ವಿಶ್ವಸಂಸ್ಥೆ ಶುಕ್ರವಾರ ಹೇಳಿದೆ.
ಅಲ್ಲಿ ನಿರಂತರವಾಗಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಈ ಮಕ್ಕಳಿಗೆ ನೆರವು ನೀಡುವ ಕಾರ್ಯದಲ್ಲಿ ಅಡಚಣೆಯುಂಟಾಗಿದೆ ಎಂದಿದೆ.ಸರಕಾರಿ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಯುದ್ಧದಲ್ಲಿ ಸುಮಾರು 13 ಲಕ್ಷ ಮಕ್ಕಳು ನಿರ್ವಸಿತರಾಗಿದ್ದಾರೆ ಎಂದು ಇರಾಕ್‌ನಲ್ಲಿ ಯುನಿಸೆಫ್‌ನ ಮುಖ್ಯ ಪ್ರತಿನಿಧಿ ಪೀಟರ್ ಹಾಕಿನ್ಸ್ ಬಗ್ದಾದ್‌ನಿಂದ ಫೋನ್ ಮೂಲಕ ಜಿನೇವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.