ಜಾಧವ್ ಪ್ರಕರಣ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿದ ಪಾಕ್

Update: 2018-01-20 17:15 GMT

ವಿಶ್ವಸಂಸ್ಥೆ, ಜ. 20: ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂಬ ಭಾರತ ಮತ್ತು ಅಮೆರಿಕಗಳ ಆರೋಪಗಳಿಂದ ಹತಾಶೆಗೊಂಡಿರುವ ಪಾಕಿಸ್ತಾನ, ತನ್ನ ದೇಶದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಕೈದಿ ಕುಲಭೂಷಣ್ ಜಾಧವ್‌ರ ಪ್ರಕರಣವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಸ್ತಾಪಿಸಿದೆ ಹಾಗೂ ತನ್ನ ದೇಶದಲ್ಲಿ ನಡೆಯುತ್ತಿರುವ ಬುಡಮೇಲು ಚಟುವಟಿಕೆಗಳ ಹಿಂದೆ ಇತರ ದೇಶಗಳಿವೆ ಎಂದು ಆರೋಪಿಸಿದೆ.

ಅಫ್ಘಾನಿಸ್ತಾನ ಕುರಿತ ಭದ್ರತಾ ಮಂಡಳಿಯ ಸಭೆಯೊಂದರಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್, ಭಯೋತ್ಪಾದಕರನ್ನು ಒಳ್ಳೆಯವರು ಮತ್ತು ಕೆಟ್ಟವರು ಎಂದು ವಿಂಗಡಿಸುವ ತನ್ನ ಬುದ್ಧಿಯನ್ನು ಪಾಕಿಸ್ತಾನ ಬಿಡಬೇಕು ಎಂದು ಹೇಳಿದರು.

ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ದಾಳಿಗಳನ್ನು ಪ್ರಾಯೋಜಿಸುವ ಪಾಕಿಸ್ತಾನದ ಮನೋಸ್ಥಿತಿಗೆ ಭಾರತವೂ ಬಲಿಪಶುವಾಗಿದೆ ಎಂದರು.

ಭಾರತದ ಆರೋಪಗಳಿಗೆ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆಗೆ ಪಾಕಿಸ್ತಾನದ ರಾಯಭಾರಿ ಮಲೀಹಾ ಲೋಧಿ, ‘‘ಮನೋಸ್ಥಿತಿಯನ್ನು ಬದಲಾಯಿಸಬೇಕೆಂದು ಹೇಳುವವರು ತಮ್ಮೊಳಗೆ ನೋಡಿಕೊಳ್ಳಬೇಕು, ನನ್ನ ದೇಶದಲ್ಲಿ ಬುಡಮೇಲು ಚಟುವಟಿಕೆಗಳನ್ನು ನಡೆಸುವ ಅದರ ಹಿನ್ನೆಲೆಯನ್ನು ನೋಡಿಕೊಳ್ಳಬೇಕು. ನಾವು ಬಂಧಿಸಿರುವ ಭಾರತೀಯ ಗೂಢಚಾರನು ಇದನ್ನು ಸಂಶಯಾತೀತವಾಗಿ ಸಾಬೀತುಪಡಿಸಿದ್ದಾನೆ’’ ಎಂದು ಹೇಳಿದರು.

ಲೋಧಿ ಯಾರನ್ನೂ ಹೆಸರಿಸಿಲ್ಲವಾದರೂ, ಅದು ಜಾಧವ್ ಎನ್ನುವುದು ಸ್ಪಷ್ಟವಾಗಿದೆ.

ಜಾಧವ್ ಪಾಕಿಸ್ತಾನದಲ್ಲಿ ಬೇಹುಗಾರಿಕೆ ಮತ್ತು ಬುಡಮೇಲು ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪಾಕಿಸ್ತಾನಿ ಸೇನೆಯು ಕಳೆದ ವರ್ಷ ಅವರಿಗೆ ಮರಣ ದಂಡನೆ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News