ಥಾಯ್ಲೆಂಡ್ ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟ: 3 ಸಾವು
Update: 2018-01-22 21:36 IST
ಬ್ಯಾಂಕಾಕ್, ಜ. 22: ಥಾಯ್ಲೆಂಡ್‌ನ ಯಾಲ ರಾಜ್ಯದ ಮಾರುಕಟ್ಟೆಯೊಂದರಲ್ಲಿ ಸೋಮವಾರ ಸಂಭವಿಸಿದ ಮೋಟಾರ್‌ಸೈಕಲ್ ಬಾಂಬ್ ಸ್ಪೋಟದಲ್ಲಿ ಮೂವರು ಮೃತಪಟ್ಟಿದ್ದಾರೆ ಹಾಗೂ 18 ಮಂದಿ ಗಾಯಗೊಂಡಿದ್ದಾರೆ ಎಂದು ಆಂತರಿಕ ಭದ್ರತಾ ಕಾರ್ಯಾಚರಣೆಗಳ ಕಮಾಂಡ್ (ಐಎಸ್‌ಒಸಿ)ನ ವಕ್ತಾರರೊಬ್ಬರು ಹೇಳಿದ್ದಾರೆ.
ಥಾಯ್ಲೆಂಡ್‌ನ ದಕ್ಷಿಣದ ನರತಿವಟ್, ಪಟ್ಟಾನಿ ಮತ್ತು ಯಾಲ ರಾಜ್ಯಗಳಲ್ಲಿ ಬುಡಕಟ್ಟು ಮಲಯ ಸಮುದಾಯ ಸ್ವಾಯತ್ತೆಗಾಗಿ ಆಗ್ರಹಿಸಿ ದೀರ್ಘಾವಧಿಯಿಂದ ಬಂಡುಕೋರ ಚಟುವಟಿಕೆಗಳನ್ನು ನಡೆಸುತ್ತಿದೆ. ಬಂಡಾಯದಲ್ಲಿ 2004ರಿಂದ ಈವರೆಗೆ 6,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.
ಆದಾಗ್ಯೂ, ರಸ್ತೆಬದಿ ಮಾರುಕಟ್ಟೆ ಸ್ಥಳದಲ್ಲಿ ನಡೆದ ಬಾಂಬ್ ಸ್ಫೋಟದ ಹೊಣೆಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ.
ಈ ವಲಯದಲ್ಲಿ 2004ರಿಂದ ನೂರಾರು ದಾಳಿಗಳು ನಡೆದಿವೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ದಾಳಿಗಳ ಪ್ರಮಾಣ ಕಡಿಮೆಯಾಗಿದೆ.