ರೊಹಿಂಗ್ಯಾ ಮುಸ್ಲಿಮರ ವಾಪಸಾತಿ ಮುಂದೂಡಿಕೆ

Update: 2018-01-22 16:13 GMT

ಢಾಕಾ, ಜ. 22: ಮ್ಯಾನ್ಮಾರ್‌ಗೆ ವಾಪಸಾಗಲು ರೊಹಿಂಗ್ಯಾ ಮುಸ್ಲಿಮರನ್ನು ಬಲವಂತಪಡಿಸಲಾಗುತ್ತಿದೆ ಎಂಬ ವ್ಯಾಪಕ ಕಳವಳಗಳ ಹಿನ್ನೆಲೆಯಲ್ಲಿ, ಮಂಗಳವಾರ ಆರಂಭಗೊಳ್ಳಬೇಕಿದ್ದ ನಿರಾಶ್ರಿತರ ವಾಪಸಾತಿಯನ್ನು ಮುಂದೂಡಲಾಗಿದೆ ಎಂದು ಬಾಂಗ್ಲಾದೇಶದ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದರು.

‘‘ಈ ಪ್ರಕ್ರಿಯೆಯು ಸ್ವಯಂಪ್ರೇರಿತವಾಗಿರಬೇಕಾಗಿರುವುದು ಮುಖ್ಯ’’ ಎಂದು ನಿರಾಶ್ರಿತ ಮತ್ತು ವಾಪಸಾತಿ ಕಮಿಶನರ್ ಅಬ್ದುಲ್ ಕಲಾಂ ಹೇಳಿದರು.

ವಾಪಸಾಗುವ ರೊಹಿಂಗ್ಯಾ ಮುಸ್ಲಿಮರ ದಾಖಲೆಪತ್ರಗಳು ಅಂತಿಮಗೊಂಡಿಲ್ಲ ಹಾಗೂ ಬಾಂಗ್ಲಾದೇಶದಲ್ಲಿ ನಿರಾಶ್ರಿತರ ಪ್ರಯಾಣ ಶಿಬಿರಗಳನ್ನು ಇನ್ನಷ್ಟೇ ನಿರ್ಮಿಸಬೇಕಾಗಿದೆ ಎಂದರು.

ವಾಪಸಾತಿ ಪ್ರಕ್ರಿಯೆ ಇನ್ನು ಯಾವಾಗ ಆರಂಭಗೊಳ್ಳುವುದು ಎನ್ನುವುದು ತಕ್ಷಣಕ್ಕೆ ತಿಳಿದುಬಂದಿಲ್ಲ.

 ಮ್ಯಾನ್ಮಾರ್‌ಗೆ ವಾಪಸಾಗುವಂತೆ ರೊಹಿಂಗ್ಯಾ ಮುಸ್ಲಿಮರ ಮೇಲೆ ಒತ್ತಡ ಹೇರಿರುವ ಸಾಧ್ಯತೆಯಿದೆ ಎಂಬ ಆತಂಕವನ್ನು ಅಂತಾರಾಷ್ಟ್ರೀಯ ನೆರವು ಕಾರ್ಯಕರ್ತರು ಮತ್ತು ರೊಹಿಂಗ್ಯಾ ನಿರಾಶ್ರಿತರು ವ್ಯಕ್ತಪಡಿಸಿದ ಬಳಿಕ ಈ ಪ್ರಕಟನೆ ಹೊರಬಿದ್ದಿದೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಮ್ಯಾನ್ಮಾರ್ ರಖೈನ್ ರಾಜ್ಯದಲ್ಲಿರುವ ಸೇನಾ ಮತ್ತು ಪೊಲೀಸ್ ಠಾಣೆಗಳ ಮೇಲೆ ರೊಹಿಂಗ್ಯಾ ಬಂಡುಕೋರರು ದಾಳಿ ನಡೆಸಿದ ಬಳಿಕ ಮ್ಯಾನ್ಮಾರ್ ಸೇನೆ ಪ್ರತೀಕಾರಾತ್ಮಕ ಕಾರ್ಯಾಚರಣೆ ನಡೆಸಿದೆ. ಸೇನೆಯ ದಮನ ಕಾರ್ಯಾಚರಣೆಗೆ ಬೆದರಿ 6.5 ಲಕ್ಷಕ್ಕಿಂತಲೂ ಅಧಿಕ ರೊಹಿಂಗ್ಯಾ ನಿರಾಶ್ರಿತರು ಮ್ಯಾನ್ಮಾರ್‌ನಿಂದ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

ಮ್ಯಾನ್ಮಾರ್ ಸರಕಾರ ನಮ್ಮ ಹಕ್ಕುಗಳನ್ನು ನೀಡಲಿ: ನಿರಾಶ್ರಿತರ ಒತ್ತಾಯ

‘‘ಅವರು ನಮ್ಮನ್ನು ಒತ್ತಾಯಪೂರ್ವಕವಾಗಿ ವಾಪಸ್ ಕಳುಹಿಸಿದರೆ ನಾವು ಹೋಗುವುದಿಲ್ಲ’’ ಎಂದು ರೊಹಿಂಗ್ಯಾ ನಿರಾಶ್ರಿತರೊಬ್ಬರು ಹೇಳಿದರು. ‘‘ಮ್ಯಾನ್ಮಾರ್ ಸರಕಾರ ನಮಗೆ ನಮ್ಮ ಹಕ್ಕುಗಳನ್ನು ನೀಡಬೇಕು ಹಾಗೂ ನಮಗೆ ನ್ಯಾಯ ಕೊಡಬೇಕು’’ ಎಂದರು.

‘‘ಅವರು ನಮ್ಮಿಂದ ದೋಚಿದ ನಮ್ಮ ಎಲ್ಲ ಸಂಪತ್ತನ್ನು ವಾಪಸ್ ಕೊಡಬೇಕು ಹಾಗೂ ಅದಕ್ಕೆ ಕಾರಣರಾದ ಜನರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಅವರು ನಮಗೆ ಪರಿಹಾರ ಕೊಡಬೇಕು. ಅದಕ್ಕಾಗಿ ಹೋರಾಟ ನಡೆಸುವುದಕ್ಕಾಗಿ ನಾವು ಇಲ್ಲಿಗೆ ಬಂದಿದ್ದೇವೆ’’ ಎಂದು ಸೈಯದ್ ನೂರ್ ಹೇಳುತ್ತಾರೆ.

‘‘ಅವುಗಳು ನಮಗೆ ಸಿಗುವುದಿಲ್ಲವಾದರೆ, ನಾವು ಇಲ್ಲಿಗೆ ಬಂದಿರುವುದಕ್ಕೆ ಏನು ಅರ್ಥವಿದೆ?’’ ಎಂದು ಅವರು ಪ್ರಶ್ನಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News