ಡಾವೋಸ್: ವಿಶ್ವ ಆರ್ಥಿಕ ವೇದಿಕೆ ಸಮ್ಮೇಳನಕ್ಕೆ ಮಂಗಳವಾರ ಚಾಲನೆ

Update: 2018-01-22 16:29 GMT

ಡಾವೋಸ್ (ಸ್ವಿಟ್ಸರ್‌ಲ್ಯಾಂಡ್), ಜ. 22: ಸ್ವಿಟ್ಸರ್‌ಲ್ಯಾಂಡ್‌ನ ಶೀತಲ ನಗರ ಡಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಝೂರಿಕ್ ಮೂಲಕ ಇಲ್ಲಿಗೆ ಆಗಮಿಸಿದ್ದಾರೆ.

ಸಮ್ಮೇಳನವು ಮಂಗಳವಾರದಿಂದ ಶುಕ್ರವಾರದವರೆಗೆ ನಡೆಯಲಿದೆ.

ಈ ಸಮ್ಮೇಳನದಲ್ಲಿ ಮೋದಿ ಅಂತಾರಾಷ್ಟ್ರೀಯ ಸಮುದಾಯದೊಂದಿಗಿನ ಭಾರತದ ಭವಿಷ್ಯದ ಸಂವಹನಗಳ ಕುರಿತ ತನ್ನ ನಿಲುವನ್ನು ವಿಶ್ವ ನಾಯಕರೊಂದಿಗೆ ಹಂಚಿಕೊಳ್ಳಲಿದ್ದಾರೆ.

ಅವರು ಮಂಗಳವಾರ ಸಮ್ಮೇಳನದ ಪೂರ್ಣಾಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಭಾಷಣ ಮಾಡಲಿದ್ದಾರೆ.

ಸ್ವಿಟ್ಸರ್‌ಲ್ಯಾಂಡ್ ಅಧ್ಯಕ್ಷ ಅಲೇನ್ ಬರ್ಸೆಟ್ ಮತ್ತು ಸ್ವೀಡನ್ ಪ್ರಧಾನಿ ಸ್ಟೀಫನ್ ಲೊಫ್‌ವೆನ್ ಜೊತೆಗೆ ಡಾವೋಸ್‌ನಲ್ಲಿ ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸುವುದನ್ನು ತಾನು ಎದುರು ನೋಡುತ್ತಿರುವುದಾಗಿ ಮೋದಿ ಈಗಾಗಲೇ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಮೋದಿ ಸೋಮವಾರ ರಾತ್ರಿ ಜಾಗತಿಕ ಕಂಪೆನಿಗಳ ಸಿಇಒಗಳಿಗಾಗಿ ಔತಣಕೂಟವೊಂದನ್ನು ಏರ್ಪಡಿಸಿದ್ದಾರೆ.

ಜಾಗತಿಕ ನಾಯಕರ ಸಂಗಮ

ವಿಶ್ವ ಆರ್ಥಿಕ ವೇದಿಕೆಯ ಡಾವೋಸ್ ಶೃಂಗ ಸಮ್ಮೇಳನದಲ್ಲಿ 60ಕ್ಕೂ ಅಧಿಕ ದೇಶಗಳ ಸರಕಾರಿ ಮುಖ್ಯಸ್ಥರು ಹಾಗೂ ನೂರಾರು ಉದ್ಯಮಿಗಳು, ಶಿಕ್ಷಣ ತಜ್ಞರು, ನಾಗರಿಕ ಸಮಾಜಗಳ ಪ್ರತಿನಿಧಿಗಳು ಮತ್ತು ಖ್ಯಾತನಾಮರು ಭಾಗವಹಿಸಲಿದ್ದಾರೆ.

ಇಲ್ಲಿ ಪರಿಸರ ಸಂರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳು, ಆಫ್ರಿಕದ ಬಗ್ಗೆ ತೆಗೆದುಕೊಳ್ಳಬೇಕಾದ ನಿಲುವು ಮತ್ತು ತಮಗೆ ಆತಿಥ್ಯ ನೀಡುವ ದೇಶಗಳಿಗೆ ನಿರಾಶ್ರಿತರು ನೀಡಬಹುದಾದ ದೇಣಿಗೆ- ಮುಂತಾದ ವಿಷಯಗಳ ಬಗ್ಗೆ ಸುಮಾರು 400 ಚರ್ಚೆಗಳು ನಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News