ಕಾಬೂಲ್ ಹೊಟೇಲ್ ಮೇಲೆ ದಾಳಿ: ಮೃತರ ಸಂಖ್ಯೆ 22ಕ್ಕೆ

Update: 2018-01-22 16:39 GMT

ಕಾಬೂಲ್, ಜ. 22: ಭಯೋತ್ಪಾದಕರು ಕಾಬೂಲ್‌ನ ವೈಭವೋಪೇತ ಹೊಟೇಲೊಂದಕ್ಕೆ ನುಗ್ಗಿ ನಡೆಸಿದ ಹತ್ಯಾಕಾಂಡದಲ್ಲಿ ಮೃತಪಟ್ಟವರ ಸಂಖ್ಯೆ ಕನಿಷ್ಠ 22ಕ್ಕೆ ಏರಿದೆ ಎಂದು ಅಫ್ಘಾನ್ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ಎಷ್ಟು ಮಂದಿ ಉಗ್ರರು ಇಂಟರ್‌ಕಾಂಟಿನೆಂಟಲ್ ಹೊಟೇಲ್‌ನ ಒಳಗೆ ನುಗ್ಗಿದ್ದಾರೆ ಎಂಬ ಬಗ್ಗೆ ಈಗಲೂ ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಅದೇ ವೇಳೆ, ಭಯೋತ್ಪಾದಕರು ದಾಳಿಯ ವೇಳೆ ಹೊಟೇಲ್‌ನ ಒಳಗಿನವರ ಸಹಕಾರ ಪಡೆದುಕೊಂಡಿರುವ ಸಾಧ್ಯತೆಗಳ ಬಗ್ಗೆ ಕಳವಳ ವ್ಯಕ್ತವಾಗಿದೆ.

ಭಯೋತ್ಪಾದಕರು ಗುಂಡಿನ ಮಳೆ ಸುರಿಸುತ್ತಾ ಸಾಗುತ್ತಿದ್ದಂತೆ, 6 ಮಹಡಿಗಳ ಹೊಟೇಲ್‌ನ ಕಂಬಗಳ ಮರೆಯಲ್ಲಿ ಮತ್ತು ಕೋಣೆಗಳಲ್ಲಿ ಅತಿಥಿಗಳು ತಲೆಮರೆಸಿಕೊಂಡರು. ಹೊಟೇಲ್‌ನ ಕೆಲವು ಭಾಗಗಳಿಗೆ ಭಯೋತ್ಪಾದಕರು ಬೆಂಕಿ ಕೊಟ್ಟರು.

ಹೊಟೇಲ್‌ಗೆ ನುಗ್ಗಿದ ಎಲ್ಲ 6 ಉಗ್ರರನ್ನು ಕೊಲ್ಲುವುದರೊಂದಿಗೆ 12 ಗಂಟೆಗಳ ಕಾಲ ನಡೆದ ದಾಳಿಯು ರವಿವಾರ ಕೊನೆಗೊಂಡಿತು.

22 ಮೃತದೇಹಗಳನ್ನು ಕಾಬೂಲ್‌ನ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ ಎಂದು ಅಫ್ಘಾನ್ ಆರೋಗ್ಯ ಸಚಿವಾಲಯದ ವಕ್ತಾರ ವಹೀದ್ ಮಜ್ರೋಹ್ ತಿಳಿಸಿದರು.

ಗಿರಾಕಿಗಳಂತೆ ಬಂದಿದ್ದ ಉಗ್ರರು

ಆಕರ್ಷಕ ರೀತಿಯಲ್ಲಿ ಬಟ್ಟೆಗಳನ್ನು ಧರಿಸಿದ್ದ ಇಬ್ಬರು ಬಂದೂಕುಧಾರಿಗಳನ್ನು ದಾಳಿ ಆರಂಭಗೊಳ್ಳುವ ಮೊದಲು ಹೊಟೇಲ್‌ನ ರೆಸ್ಟೋರೆಂಟ್‌ನಲ್ಲಿ ನೋಡಿದ್ದಾಗಿ ಹೊಟೇಲ್ ಸಿಬ್ಬಂದಿಯೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

‘‘ಆಗ ಸುಮಾರು ರಾತ್ರಿ 8:30 ಆಗಿತ್ತು. ಅವರು ಹೊಟೇಲ್‌ನ ಮೂಲೆಯೊಂದರಲ್ಲಿ ಕುಳಿತಿದ್ದರು. ಬಳಿಕ ಅವರು ತಕ್ಷಣ ಗುಂಡಿನ ಸುರಿಮಳೆ ಸುರಿಸಿದರು’’ ಎಂದು ದಾಳಿಯಲ್ಲಿ ಗಾಯಗೊಂಡ ಸಿಬ್ಬಂದಿ ಆಸ್ಪತ್ರೆಯಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News