×
Ad

ಮುಸ್ಲಿಮ್ ವಿರೋಧಿ ವೀಡಿಯೊ ಶೇರ್ ಮಾಡಿದ್ದಕ್ಕೆ ಕ್ಷಮೆ ಕೋರಿದ ಟ್ರಂಪ್

Update: 2018-01-26 21:37 IST

ಲಂಡನ್, ಜ. 26: ಬ್ರಿಟನ್‌ನ ಕಡು ಬಲಪಂಥೀಯ ಗುಂಪೊಂದರ ನಾಯಕಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಾಕಿರುವ ಮುಸ್ಲಿಮ್ ವಿರೋಧಿ ವೀಡಿಯೊಗಳನ್ನು ತಾನು ಶೇರ್ ಮಾಡಿರುವುದು ಜನರ ಭಾವನೆಗಳಿಗೆ ಘಾಸಿ ಉಂಟುಮಾಡುವ ಉದ್ದೇಶದಿಂದಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ ಹಾಗೂ ಅದಕ್ಕಾಗಿ ತಾನು ಕ್ಷಮೆ ಕೋರುತ್ತೇನೆ ಎಂದಿದ್ದಾರೆ.

 ಐಟಿವಿಯ ‘ಗುಡ್ ಮಾರ್ನಿಂಗ್ ಬ್ರಿಟನ್ ಶೋ’ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ಆ ಗುಂಪಿನ ಬಗ್ಗೆ ತನಗೆ ಏನೂ ತಿಳಿದಿಲ್ಲ ಎಂದು ಹೇಳಿದರು. ‘‘ಆದರೆ, ನಾನು ಜನಾಂಗೀಯವಾದಿಯಲ್ಲ ಹಾಗೂ ಆ ಮುಸ್ಲಿಮ್ ವಿರೋಧಿ ವೀಡಿಯೊಗಳನ್ನು ತಾನು ರಿಟ್ವೀಟ್ ಮಾಡಿರುವೆನಾದರೂ ಅದು ತನ್ನ ಅನುಮೋದನೆಯಲ್ಲ’’ ಎಂದರು.

 ಮುಸ್ಲಿಮ್ ವಿರೋಧಿ ವೀಡಿಯೊಗಳನ್ನು ಶೇರ್ ಮಾಡುವ ಮೂಲಕ ಟ್ರಂಪ್ ನವೆಂಬರ್‌ನಲ್ಲಿ ವಿವಾದವೊಂದನ್ನು ಸೃಷ್ಟಿಸಿದ್ದರು. ರಿಟ್ವೀಟ್ ಮಾಡಿರುವುದನ್ನು ಬ್ರಿಟನ್ ಪ್ರಧಾನಿ ತೆರೇಸಾ ಮೇ ಟೀಕಿಸಿದ ಬಳಿಕ, ಅವರೊಂದಿಗೆ ಟ್ರಂಪ್ ಬಹಿರಂಗ ಜಗಳಕ್ಕೂ ನಿಂತಿದ್ದರು.

ಆ ವೀಡಿಯೊಗಳನ್ನು ರೀಟ್ವೀಟ್ ಮಾಡಿರುವುದಕ್ಕೆ ಕ್ಷಮೆ ಯಾಚಿಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಮೊದಲು ಹಾಕಿದ ಗುಂಪು ಜನಾಂಗೀಯವಾದಿಗಳಾಗಿದ್ದರೆ ತಾನು ಕ್ಷಮೆ ಕೋರುವೆ ಎಂದರು.

ಮೇ ಜೊತೆ ಉತ್ತಮ ಸಂಬಂಧ

ಬ್ರಿಟನ್‌ಗೆ ಯಾವುದೇ ತೊಂದರೆ ನೀಡುವ ಉದ್ದೇಶ ತನಗಿರಲಿಲ್ಲ ಎಂದು ಹೇಳಿದ ಅವರು, ಆ ದೇಶವನ್ನು ತಾನು ತುಂಬಾ ಪ್ರೀತಿಸುತ್ತೇನೆ ಎಂದರು.

‘‘ನಿಮ್ಮ ಪ್ರಧಾನಿಯೊಂದಿಗೆ ಅತ್ಯುತ್ತಮ ಸಂಬಂಧವನ್ನು ನಾನು ಹೊಂದಿದ್ದೇನೆ ಎಂದು ನಾನು ನಿಮಗೆ ಹೇಳಬಲ್ಲೆ. ಅವರು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾವು ಉತ್ತಮ ರೀತಿಯ ಸಂಬಂಧ ಹೊಂದಿದ್ದೇವೆ. ಆದಾಗ್ಯೂ, ನಾವು ಉತ್ತಮ ಸಂಬಂಧ ಹೊಂದಿಲ್ಲ ಎಂದು ಕೆಲವರು ಭಾವಿಸಿದ್ದಾರೆ’’ ಎಂದು ಟ್ರಂಪ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News