ಮಾನವಹಕ್ಕುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ: ಸೂ ಕಿಗೆ ಫಿಲಿಪ್ಪೀನ್ಸ್ ಅಧ್ಯಕ್ಷರ ಸಲಹೆ

Update: 2018-01-26 16:48 GMT

ಮನಿಲಾ (ಫಿಲಿಪ್ಪೀನ್ಸ್), ಜ. 26: ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಸೇನೆ ನಡೆಸುತ್ತಿರುವ ದಮನ ಕಾರ್ಯಾಚರಣೆ ಬಗ್ಗೆ ಮೌನವಾಗಿರುವ ಆ ದೇಶದ ನಾಯಕಿ ಆಂಗ್ ಸಾನ್ ಸೂ ಕಿ ವಿರುದ್ಧ ಮಾನವಹಕ್ಕುಗಳ ಹೋರಾಟಗಾರರು ಟೀಕಾಪ್ರಹಾರ ನಡೆಸುತ್ತಿರುವಂತೆಯೇ, ಅವರ ರಕ್ಷಣೆಗೆ ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ಧಾವಿಸಿದ್ದಾರೆ.

‘‘ಮಾನವಹಕ್ಕು ಹೋರಾಟಗಾರರ ಬಗ್ಗೆ ನೀವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅವರು ಕೇವಲ ಶಬ್ದ ಮಾಡುತ್ತಾರೆ ಅಷ್ಟೆ’’ ಎಂದು ಡುಟರ್ಟ್ ಹೇಳಿದ್ದಾರೆ.

 ಹೊಸದಿಲ್ಲಿಯಲ್ಲಿ ನಡೆದ ಆಗ್ನೇಯ ಏಶ್ಯ ದೇಶಗಳ ಶೃಂಗಸಮ್ಮೇಳನದ ವೇಳೆ ಏರ್ಪಟ್ಟ ಫಿಲಿಪ್ಪೀನ್ಸ್-ಭಾರತ ವ್ಯಾಪಾರ ವೇದಿಕೆಯಲ್ಲಿ ಮಾಡಿದ ಭಾಷಣದಲ್ಲಿ ಅವರು ಮಾತುಗಳನ್ನು ಹೇಳಿದ್ದಾರೆ.

ಈ ಶೃಂಗ ಸಮ್ಮೇಳನದಲ್ಲಿ ಡುಟರ್ಟ್ ಮತ್ತು ಸೂ ಕಿ ಭಾಗವಹಿಸಿದ್ದಾರೆ.

‘‘ನಾವು ನಮ್ಮ ದೇಶಗಳ ಬಗ್ಗೆ, ನಮ್ಮ ದೇಶದ ಹಿತಾಸಕ್ತಿಗಳ ಬಗ್ಗೆ ಮಾತನಾಡುತ್ತಿದ್ದೆವು. ‘ಮಾನವಹಕ್ಕುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಅವರು ಕೇವಲ ಶಬ್ದ ಮಾಡುವ ಒಂದು ಗುಂಪು’ ಎಂದು ನಾನು ಹೇಳಿದೆ’’ ಎಂದು ಡುಟರ್ಟ್ ನುಡಿದರು.

ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಸೇನೆ ನಡೆಸಿದ ಬರ್ಬರ ದಮನ ಕಾರ್ಯಾಚರಣೆಯಲ್ಲಿ ನೂರಾರು ರೊಹಿಂಗ್ಯಾ ಮುಸ್ಲಿಮರು ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಸುಮಾರು 7 ಲಕ್ಷ ನಿರಾಶ್ರಿತರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News