ಪಾಕ್‌ಗೆ ನೆರವು ಸ್ಥಗಿತ ಕೋರುವ ಮಸೂದೆ ಮಂಡಿಸಿದ ಸೆನೆಟರ್

Update: 2018-01-26 17:47 GMT

ವಾಶಿಂಗ್ಟನ್, ಜ. 26: ಪಾಕಿಸ್ತಾನಕ್ಕೆ ನೀಡಲಾಗುವ 2 ಬಿಲಿಯ ಡಾಲರ್ (ಸುಮಾರು 12,714 ಕೋಟಿ ರೂಪಾಯಿ) ನಾಗರಿಕ ನೆರವನ್ನು ಸ್ಥಗಿತಗೊಳಿಸುವಂತೆ ಫೆಡರಲ್ ಸರಕಾರವನ್ನು ನಿರ್ಬಂಧಿಸುವ ಹಾಗೂ ಆ ಮೊತ್ತವನ್ನು ವಾಶಿಂಗ್ಟನ್‌ನ ರಸ್ತೆಗಳನ್ನು ಅಭಿವೃದ್ಧಿಪಡಿಸುವುದಕ್ಕೆ ವಿನಿಯೋಗಿಸುವ ಮಸೂದೆಯೊಂದನ್ನು ಅಮೆರಿಕದ ಸೆನೆಟರ್ ರ್ಯಾಂಡ್ ಪೌಲ್ ಜಾರಿಗೊಳಿಸಿದ್ದಾರೆ.

‘‘ ‘ಅಮೆರಿಕಕ್ಕೆ ಸಾವಾಗಲಿ’ ಎಂದು ಕೂಗುವ ಹಾಗೂ ನಮ್ಮ ಧ್ವಜಗಳನ್ನು ಸುಡುವ ದೇಶಗಳಿಗೆ ನಾವು ಬೆಂಬಲ ನೀಡುವುದೆಂದರೆ, ನಮ್ಮ ದೇಶವನ್ನು ರಕ್ಷಿಸುವ ಹಾಗೂ ತೆರಿಗೆದಾರರ ಕಠಿಣ ಪರಿಶ್ರಮದ ಹಣವನ್ನು ಸರಿಯಾಗಿ ವಿನಿಯೋಗಿಸುವ ನಮ್ಮ ಜವಾಬ್ದಾರಿಯಿಂದ ನಾವು ವಿಮುಖರಾಗಿದ್ದೇವೆ ಎಂದು ಅರ್ಥ. ಕ್ರೈಸ್ತರನ್ನು ಹಿಂಸಿಸುವ ಹಾಗೂ ವೈದ್ಯ ಸೇರಿದಂತೆ ಒಸಾಮ ಬಿನ್ ಲಾದೆನ್‌ನನ್ನು ಹಿಡಿಯಲು ನಮಗೆ ಸಹಾಯ ಮಾಡಿದ ಜನರನ್ನು ಜೈಲಿಗೆ ತಳ್ಳಿದ ದೇಶವೊಂದಕ್ಕೆ ಕೊಡುವುದಕ್ಕಿಂತ ಆ ಹಣವನ್ನು ನಾವು ಮರಳಿ ತಂದು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಉತ್ತಮ’’ ಎಂದು ಕೆಂಟಕಿ ರಾಜ್ಯದ ರಿಪಬ್ಲಿಕನ್ ಸೆನೆಟರ್ ಪೌಲ್ ಹೇಳಿಕೆಯೊಂದರಲ್ಲಿ ಹೇಳಿದ್ದಾರೆ.

ಈ ಮಸೂದೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಬೆಂಬಲ ವ್ಯಕ್ತಪಡಿಸಿದ್ದಾರೆ.

 ಮಸೂದೆಯನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಡೆಮಾಕ್ರಟಿಕ್ ಪಕ್ಷದ ಸಂಸದೆ ತುಳಸಿ ಗಬಾರ್ಡ್ ಮತ್ತು ರಿಪಬ್ಲಿಕನ್ ಪಕ್ಷದ ಮಾರ್ಕ್ ಸ್ಯಾನ್‌ಫೋರ್ಡ್ ಮಂಡಿಸಲಿದ್ದಾರೆ ಎಂದು ಪೌಲ್ ಕಚೇರಿ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News