ಗೆಲುವಿನ ಬರ ನೀಗಿಸಿಕೊಂಡ ಆಸ್ಟ್ರೇಲಿಯ

Update: 2018-01-26 18:11 GMT

ಅಡಿಲೇಡ್, ಜ.26: ಅಗ್ರ ಕ್ರಮಾಂಕದಲ್ಲಿ ಭಡ್ತಿ ಪಡೆದು ಆಡಿದ ಟ್ರಾವಿಸ್ ಹೆಡ್ ಜವಾಬ್ದಾರಿಯುತ ಬ್ಯಾಟಿಂಗ್(96,107ಎಸೆತ) ನೆರವಿನಿಂದ ಆಸ್ಟ್ರೇಲಿಯ ತಂಡ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು 3 ವಿಕೆಟ್‌ಗಳಿಂದ ಜಯಿಸಿ ಸರಣಿಯಲ್ಲಿ ಗೆಲುವಿನ ಬರ ನೀಗಿಸಿಕೊಂಡಿದೆ.

 ಗಾಯಗೊಂಡಿರುವ ಆರಂಭಿಕ ಆಟಗಾರ ಆ್ಯರೊನ್ ಫಿಂಚ್ ಬದಲಿಗೆ ಆಡಿದ ಹೆಡ್ ಆಕರ್ಷಕ 96 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಬೌಲರ್ ಸ್ನೇಹಿ ಪಿಚ್‌ನಲ್ಲಿ 61 ರನ್ ಗಳಿಸುವಷ್ಟರಲ್ಲಿ ಅಗ್ರ ಆರು ಬ್ಯಾಟ್ಸ್‌ಮನ್‌ಗಳನ್ನು ಬೇಗನೆ ಕಳೆದುಕೊಂಡಿತು. ಕ್ರಿಸ್ ವೋಕ್ಸ್ ಸಾಹಸದಿಂದ ಅಂತಿಮವಾಗಿ 196 ರನ್‌ಗೆ ಆಲೌಟಾಯಿತು.

ಗೆಲ್ಲಲು ಸುಲಭ ಸವಾಲು ಪಡೆದ ಆಸ್ಟ್ರೇಲಿಯ ಇನ್ನೂ 13 ಓವರ್‌ಗಳು ಬಾಕಿ ಇರುವಾಗಲೇ 7 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿತು.

107 ಎಸೆತಗಳನ್ನು ಎದುರಿಸಿದ ಹೆಡ್ 15 ಬೌಂಡರಿ ಸಹಿತ 96 ರನ್ ಗಳಿಸಿದರು. ಕೇವಲ 4 ರನ್‌ಗಳಿಂದ ಎರಡನೇ ಶತಕ ವಂಚಿತರಾದರು. ಈಗಾಗಲೇ 5 ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿ ಸರಣಿ ಗೆದ್ದುಕೊಂಡಿರುವ ಇಂಗ್ಲೆಂಡ್ ರವಿವಾರ ಪರ್ತ್‌ನಲ್ಲಿ ಐದನೇ ಹಾಗೂ ಕೊನೆಯ ಪಂದ್ಯ ಆಡಲಿದೆ.

ಇದಕ್ಕೂ ಮೊದಲು ಆಸ್ಟ್ರೇಲಿಯ ನಾಯಕ ಸ್ಟೀವನ್ ಸ್ಮಿತ್‌ರಿಂದ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ಏಕದಿನದ ಕನಿಷ್ಠ ಸ್ಕೋರ್ 86 ರನ್‌ಗೆ ಆಲೌಟಾಗುವ ಅಪಾಯದಲ್ಲಿತ್ತು. ಆಗ ಆಲ್‌ರೌಂಡರ್ ಕ್ರಿಸ್ ವೋಕ್ಸ್ ತಂಡಕ್ಕೆ ಆಸರೆಯಾದರು. ವೋಕ್ಸ್(78), ಇಯಾನ್ ಮೊರ್ಗನ್(33) ಮೊಯಿನ್ ಅಲಿ (33)ಹಾಗೂ ಟಾಮ್ ಕುರ್ರನ್(35) ಇಂಗ್ಲೆಂಡ್ ಗೌರವಾರ್ಹ ಮೊತ್ತ ಗಳಿಸಲು ನೆರವಾದರು.

ಸರಣಿಯಲ್ಲಿ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ ವೋಕ್ಸ್ ತಾನೆದುರಿಸಿದ 82 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್‌ಗಳನ್ನು ಸಿಡಿಸಿ ಆ್ಯಂಡ್ರೂ ಟೈಗೆ(3-33) ವಿಕೆಟ್ ಒಪ್ಪಿಸಿದರು.

 ಮೊದಲ ಪಂದ್ಯದಲ್ಲಿ 180 ರನ್ ಗಳಿಸಿ ದಾಖಲೆ ನಿರ್ಮಿಸಿದ್ದ ಜೇಸನ್ ರಾಯ್(0) ಇನಿಂಗ್ಸ್‌ನ 2ನೇ ಎಸೆತದಲ್ಲಿ ಜೋಶ್ ಹೇಝಲ್‌ವುಡ್‌ಗೆ(3-39) ವಿಕೆಟ್ ಒಪ್ಪಿಸಿದರು. ಜೀವನಶ್ರೇಷ್ಠ ಬೌಲಿಂಗ್ ಮಾಡಿದ ಪ್ಯಾಟ್ ಕಮಿನ್ಸ್(4-24) ಅಲೆಕ್ಸ್ ಹೇಲ್ಸ್(3)ವಿಕೆಟ್ ಉಡಾಯಿಸಿದರು.

ಆರಂಭಿಕ ಆಟಗಾರ ಜಾನಿ ಬೈರ್‌ಸ್ಟೋವ್ ಖಾತೆ ತೆರೆಯುವ ಮೊದಲೇ ವಿಕೆಟ್ ಒಪ್ಪಿಸಿದರು. ಟೆಸ್ಟ್ ನಾಯಕ ಜೋ ರೂಟ್ ಕೂಡ ಶೂನ್ಯ ಸಂಪಾದಿಸಿದರು. ಜೋ ಬಟ್ಲರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಇಂಗ್ಲೆಂಡ್‌ನ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.

 ಕೆಳ ಕ್ರಮಾಂಕದಲ್ಲಿ ಆಲ್‌ರೌಂಡರ್ ಮೊಯಿನ್ ಅಲಿ ಹಾಗೂ ಬಾಲಂಗೋಚಿ ಕುರ್ರನ್ ಅವರೊಂದಿಗೆ ಕ್ರಮವಾಗಿ 51 ಹಾಗೂ 60 ರನ್ ಜೊತೆಯಾಟ ನಡೆಸಿದ ವೋಕ್ಸ್ ತಂಡದ ಸ್ಕೋರನ್ನು 200ರ ಗಡಿ ತಲುಪಿಸಿದರು.

ಸಂಕ್ಷಿಪ್ತ ಸ್ಕೋರ್

►ಇಂಗ್ಲೆಂಡ್: 44.5 ಓವರ್‌ಗಳಲ್ಲಿ 196 ರನ್‌ಗೆ ಆಲೌಟ್

(ಕ್ರಿಸ್ ವೋಕ್ಸ್ 78, ಟಾಮ್ ಕುರ್ರನ್ 35, ಮೊಯಿನ್ ಅಲಿ 33, ಮೊರ್ಗನ್ 33, ಕಮಿನ್ಸ್ 4-24, ಹೇಝಲ್‌ವುಡ್ 3-39, ಟೈ 3-33)

►ಆಸ್ಟ್ರೇಲಿಯ: 37 ಓವರ್‌ಗಳಲ್ಲಿ 197/7

(ಹೆಡ್ 96, ಮಿಚೆಲ್ ಮಾರ್ಷ್ 32, ಪೈನ್ ಔಟಾಗದೆ 25,ಆದಿಲ್ ರಶೀದ್ 3-49)

►ಪಂದ್ಯಶ್ರೇಷ್ಠ: ಪ್ಯಾಟ್ ಕಮಿನ್ಸ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News