ಸೈನಾ ಇಂಡೋನೇಷ್ಯಾ ಮಾಸ್ಟರ್ಸ್‌ ಫೈನಲ್‌ಗೆ ಲಗ್ಗೆ

Update: 2018-01-27 13:26 GMT

ಜಕಾರ್ತ, ಜ.27: ಇಂಡೋನೇಷ್ಯಾ ಮಾಸ್ಟರ್ಸ್‌ ಮಹಿಳೆಯರ ಬ್ಯಾಂಡ್ಮಿಂಟನ್‌ನ ಮಹಿಳೆಯರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಭಾರತದ ಮಹಿಳಾ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಫೈನಲ್ ತಲುಪಿದ್ದಾರೆ.

ಶನಿವಾರ ನಡೆದ ಮಹಿಳೆಯರ ಸೆಮಿಫೈನಲ್‌ನಲ್ಲಿ ಸೈನಾ ಅವರು ವಿಶ್ವದ ಮಾಜಿ ನಂ.1 ತಾರೆ ಥಾಯ್ಲ್ಲೆಂಡ್‌ನ ರಚನಾಕ್ ಇಂಟನಾನ್ ಅವರನ್ನು 21-19, 21-19 ನೇರ ಸೆಟ್‌ಗಳಿಂದ ಮಣಿಸಿ ಪ್ರಶಸ್ತಿಯ ಸುತ್ತು ತಲುಪಿದ್ದಾರೆ.

ಸೈನಾ ಮತ್ತು ಇಂಟನಾನ್ ಅವರ ನಡುವಿನ ಸೆಮಿಫೈನಲ್ ಹಣಾಹಣಿ 48 ನಿಮಿಷಗಳಲ್ಲಿ ಮುಗಿಯಿತು.

2013ರ ವಿಶ್ವ ಚಾಂಪಿಯನ್ ರಚನಾಕ್ ವಿರುದ್ಧ ಸೈನಾ 8-5 ಗೆಲುವಿನ ದಾಖಲೆ ಹೊಂದಿದ್ದರು. ಇದೀಗ 9ನೇ ಬಾರಿ ಗೆಲುವು ದಾಖಲಿಸಿದ್ದಾರೆ.

ಕಳೆದ ವರ್ಷ ಮಲೇಷ್ಯಾ ಮಾಸ್ಟರ್ಸ್‌ ಜಯಿಸಿದ ಬಳಿಕ ಮೊದಲ ಬಾರಿ ಸೈನಾ ಪ್ರಶಸ್ತಿಯ ಸುತ್ತು ಪ್ರವೇಶಿಸಿದ್ದಾರೆ. ಫೈನಲ್‌ನಲ್ಲಿ ಸೈನಾ ಅವರು ವಿಶ್ವದ ನಂ.1 ಆಟಗಾರ್ತಿ ತೈಪೆಯ ತೈ ಝು ಯಿಂಗ್ ಅಥವಾ ಚೀನಾದ 8ನೇ ಶ್ರೇಯಾಂಕದ ಹಿ ಬಿಂಗ್‌ಜಾವೋ ಅವರನ್ನು ಎದುರಿಸುವರು.

ಮೊದಲ ಗೇಮ್‌ನಲ್ಲಿ ರಚನಾಕ್ ಅವರು ಸೈನಾ ವಿರುದ್ಧ 3-1 ಅಂತರದಲ್ಲಿ ಮೇಲುಗೈ ಸಾಧಿಸಿದ್ದರು. ಬಳಿಕ ಅವರ ಹಿಡಿತ ಸಡಿಲಗೊಂಡಿತು. ಸೈನಾ ತಿರುಗೇಟು ನೀಡಿ ರಚನಾಕ್‌ಗೆ ಆಘಾತ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News