ಕಾಬೂಲ್ ಹೊಟೇಲ್ ದಾಳಿಯ ಉಗ್ರನಿಗೆ ಪಾಕ್ ಗುಪ್ತಚರ ಸಂಸ್ಥೆಯ ತರಬೇತಿ
ವಾಶಿಂಗ್ಟನ್, ಜ. 30: ಕಾಬೂಲ್‌ನ ಐಶಾರಾಮಿ ಇಂಟರ್‌ಕಾಂಟಿನೆಂಟಲ್ ಹೊಟೇಲ್ ಮೇಲೆ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರರ ಪೈಕಿ ಓರ್ವನಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ತರಬೇತಿ ನೀಡಿತ್ತು ಎಂದು ಅಫ್ಘಾನಿಸ್ತಾನದ ಉನ್ನತ ರಾಜತಾಂತ್ರಿಕರೊಬ್ಬರು ಆರೋಪಿಸಿದ್ದಾರೆ.
ವಿಶ್ವಸಂಸ್ಥೆಗೆ ಅಫ್ಘಾನಿಸ್ತಾನದ ಖಾಯಂ ಪ್ರತಿನಿಧಿ ಮಹ್ಮೂದ್ ಸೈಕಾಲ್ ರವಿವಾರ ಟ್ವಿಟರ್ ಮೂಲಕ ಐಎಸ್‌ಐ ವಿರುದ್ಧ ಈ ಗಂಭೀರ ಆರೋಪ ಮಾಡಿದ್ದಾರೆ.
‘‘ಕಾಬೂಲ್‌ನ ಇಂಟರ್‌ಕಾಂಟಿನೆಂಟಲ್ ಹೊಟೇಲ್ ಮೇಲೆ ಕಳೆದ ವಾರ ನಡೆದ ದಾಳಿಯಲ್ಲಿ ಭಾಗಿಯಾದ ಭಯೋತ್ಪಾದಕರ ಪೈಕಿ ಓರ್ವನ ತಂದೆ ಅಬ್ದುಲ್ ಕಹರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತನ್ನ ಮಗನಿಗೆ ಪಾಕಿಸ್ತಾನದ ಐಎಸ್‌ಐ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತದ ಚಮನ್‌ನಲ್ಲಿ ತರಬೇತಿ ನೀಡಿದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಕಹರ್ ಈಗ ಅಫ್ಘಾನಿಸ್ತಾನದ ಅಧಿಕಾರಿಗಳ ಸುಪರ್ದಿಯಲ್ಲಿದ್ದಾರೆ’’ ಎಂದು ಸೈಕಾಲ್ ಟ್ವೀಟ್ ಮಾಡಿದ್ದಾರೆ.
ಜನವರಿ 20ರಂದು ಕಲಾಶ್ನಿಕೊವ್ ರೈಫಲ್‌ಗಳು ಮತ್ತು ಆತ್ಮಹತ್ಯಾ ದಿರಿಸುಗಳನ್ನು ಹೊಂದಿದ ತಾಲಿಬಾನಿ ಉಗ್ರರು ಇಂಟರ್‌ಕಾಂಟಿನೆಂಟಲ್ ಹೊಟೇಲ್ ಮೇಲೆ ದಾಳಿ ನಡೆಸಿದ್ದರು. ದಾಳಿಯಲ್ಲಿ ವಿದೇಶೀಯರು ಸೇರಿದಂತೆ 40 ಮಂದಿ ಮೃತಪಟ್ಟಿದ್ದಾರೆ.
ಭಯೋತ್ಪಾದಕರು 12 ಗಂಟೆಗಳಿಗೂ ಅಧಿಕ ಕಾಲ ಹೊಟೇಲ್‌ನಲ್ಲಿದ್ದು, ವಿದೇಶೀಯರಿಗಾಗಿ ಪ್ರತಿ ಕೋಣೆಯಲ್ಲೂ ಹುಡುಕಾಟ ನಡೆಸಿದ್ದರು.
ಪಾಕ್ ಸೇನೆಯಿಂದ ರಾತ್ರಿ ದರ್ಶಕ ಕನ್ನಡಕಗಳ ಪೂರೈಕೆ
‘‘ಮೈವಾಂಡ್‌ನ ಎಎನ್‌ಎ ನೆಲೆಯಲ್ಲಿ ತಾಲಿಬಾನ್ ದಾಳಿಕೋರರಲ್ಲಿ ಪತ್ತೆಯಾದ ರಾತ್ರಿದರ್ಶಕ ಕನ್ನಡಕಗಳು ಸೇನಾ ದರ್ಜೆಯ ಕನ್ನಡಕಗಳಾಗಿವೆ. ಅವುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಗುವುದಿಲ್ಲ. ಅವುಗಳನ್ನು ಪಾಕಿಸ್ತಾನಿ ಸೇನೆಯು ಬ್ರಿಟಿಶ್ ಕಂಪೆನಿಯೊಂದರಿಂದ ಪಡೆದು ಕಾಶ್ಮೀರದಲ್ಲಿರುವ ಲಷ್ಕರ್ ಎ ತೊಯ್ಬಾ ಮತ್ತು ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್ ಉಗ್ರರಿಗೆ ಪೂರೈಸಿದೆ. ಲಷ್ಕರ್ ಎ ತೊಯ್ಬಾ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯಾಗಿದೆ’’ ಎಂದು ಅಫ್ಘಾನಿಸ್ತಾನ ರಾಯಭಾರ ಕಚೇರಿಯಲ್ಲಿರುವ ಸಾಂಸ್ಕೃತಿಕ ಅಧಿಕಾರಿ ಮಜೀದ್ ಕರಾರ್ ಹೇಳಿದ್ದಾರೆ.