ಮೆಲ್ಬೋರ್ನ್ ನಲ್ಲಿ 2020ರ ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್ ಫೈನಲ್

Update: 2018-01-30 18:55 GMT

ಮೆಲ್ಬೋರ್ನ್, ಜ.30: ಆಸ್ಟ್ರೇಲಿಯ ಆತಿಥ್ಯ ವಹಿಸಿಕೊಂಡಿರುವ 2020ರ ಪುರುಷ ಮತ್ತು ಮಹಿಳಾ ಟ್ವೆಂಟಿ-20 ಕ್ರಿಕೆಟ್ ಫೈನಲ್ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯಲಿದೆ. ಮಹಿಳಾ ವಿಶ್ವಕಪ್ ಟ್ವೆಂಟಿ-20 ಟೂರ್ನಮೆಂಟ್ ನಲ್ಲಿ 10 ತಂಡಗಳು ಭಾಗವಹಿಸಲಿದೆ. ಟೂರ್ನಮೆಂಟ್‌ನ ಪಂದ್ಯಗಳು ಫೆಬ್ರವರಿ 21ರಿಂದ ಮಾರ್ಚ್ 8ರ ತನಕ ನಡೆಯಲಿದೆ.

ಪುರುಷರ ಟ್ವೆಂಟಿ-20 ವಿಶ್ವಕಪ್ ಅಕ್ಟೋಬರ್ 18ರಿಂದ ನ.15ರ ತನಕ ಜರುಗಲಿದೆ. ಮೊದಲ ಬಾರಿಗೆ ಪುರುಷ ಮತ್ತು ಮಹಿಳಾ ವಿಶ್ವಕಪ್ ಒಂದೇ ವರ್ಷ ಮತ್ತು ಒಂದೇ ದೇಶದಲ್ಲಿ ನಿಗದಿಯಾಗಿದೆ.

ಮಹಿಳಾ ವಿಶ್ವಕಪ್ ಕೂಟದ ಫೈನಲ್ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ನಡೆಯಲಿದೆ. ಈ ಪಂದ್ಯದ ವೀಕ್ಷಣೆಗೆ ಗರಿಷ್ಠ ಸಂಖ್ಯೆಯಲ್ಲಿ ವೀಕ್ಷಕರು ಭಾಗವಹಿಸುವುದನ್ನು ನಿರೀಕ್ಷಿಸಲಾಗಿದೆ.

   1999ರಲ್ಲಿ ರೋಸ್ ಬೌಲ್‌ನಲ್ಲಿ ನಡೆದ ಅಮೆರಿಕ ಮತ್ತು ಚೀನಾ ತಂಡಗಳ ನಡುವೆ ನಡೆದ ಮಹಿಳಾ ವಿಶ್ವಕಪ್ ಫುಟ್ಬಾಲ್ ಫೈನಲ್‌ನಲ್ಲಿ 90,185 ಪ್ರೇಕ್ಷಕರು ಭಾಗವಹಿಸಿದ್ದರು. ಇದು ಸಾರ್ವಕಾಲಿಕ ದಾಖಲೆಯಾಗಿದೆ. ಮಹಿಳಾ ವಿಶ್ವಕಪ್ ಕೂಟದ ಎರಡು ಸೆಮಿಫೈನಲ್ ಪಂದ್ಯಗಳು ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯಲಿದೆ.

 ಹೋಬರ್ಟ್ ಮತ್ತು ಗೀಲಾಂಗ್ ಕ್ರೀಡಾಂಗಣಗಳಲ್ಲಿ ಪುರುಷರ ವಿಶ್ವಕಪ್‌ನ ಗ್ರೂಪ್ ಹಂತದ 6 ಪಂದ್ಯಗಳು ನಿಗದಿಯಾಗಿವೆೆ. ಸಿಡ್ನಿ ಮತ್ತು ಆಡಿಲೇಡ್‌ನಲ್ಲಿ ಎರಡು ಸೆಮಿಫೈನಲ್ ಪಂದ್ಯಗಳು ನಡೆಯಲಿವೆೆ.

ಆಸ್ಟ್ರೇಲಿಯದ ಕ್ರಿಕೆಟ್ ತಂಡ ಟ್ವೆಂಟಿ-20 ವಿಶ್ವಕಪ್ ದೊಡ್ಡ ಸಾಧನೆ ಮಾಡಿಲ್ಲ. 2010ರಲ್ಲಿ ವೆಸ್ಟ್‌ಇಂಡೀಸ್‌ನಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ ಕೂಟದಲ್ಲಿ ಆಸ್ಟ್ರೇಲಿಯ ಫೈನಲ್ ತಲುಪಿತ್ತು. ಆದರೆ ಕಳೆದ ಎರಡು ವಿಶ್ವಕಪ್‌ಗಳಲ್ಲಿ ಆಸ್ಟ್ರೇಲಿಯ ಎರಡನೇ ಸುತ್ತಿನಲ್ಲಿ ಸೋತು ನಿರ್ಗಮಿಸಿತ್ತು. 2020 ರಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ ಪ್ರಶಸ್ತಿಯ ಬರ ನೀಗಿಸಲಿದೆ ಎಂಬ ವಿಶ್ವಾಸವನ್ನು ಆಸ್ಟ್ರೇಲಿಯ ತಂಡದ ನಾಯಕ ಸ್ಟೀವ್ ಸ್ಮಿತ್ ವ್ಯಕ್ತ ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News