ರಾಹುಲ್ ದ್ರಾವಿಡ್‌ಗೆ ಅಫ್ರಿದಿ ಅಭಿನಂದನೆ!

Update: 2018-02-04 12:31 GMT

ಕರಾಚಿ, ಫೆ.4: ಮಾಜಿ ನಾಯಕ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತದ ಕಿರಿಯರ ತಂಡ ಐಸಿಸಿ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು ಮಣಿಸಿ ನಾಲ್ಕನೇ ಬಾರಿ ಚಾಂಪಿಯನ್‌ಪಟ್ಟಕ್ಕೇರಿ ದಾಖಲೆ ನಿರ್ಮಿಸಿದೆ. ದ್ರಾವಿಡ್ 2016ರ ಆವೃತ್ತಿಯಲ್ಲೂ ಭಾರತದ ಕೋಚ್ ಆಗಿದ್ದರು. ಆಗ ಭಾರತ ಎರಡನೇ ಸ್ಥಾನ ಪಡೆದು ಪ್ರಶಸ್ತಿ ವಂಚಿತವಾಗಿತ್ತು. ಈ ಬಾರಿ ಹಿಂದಿನ ತಪ್ಪನ್ನು ತಿದ್ದಿಕೊಂಡು ಪ್ರಶಸ್ತಿ ಎತ್ತಿಹಿಡಿದಿದೆ.

ಭಾರತದ ಅಂಡರ್-19 ತಂಡದ ಹಿಂದಿನ ರೂವಾರಿ ದ್ರಾವಿಡ್‌ಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ದ್ರಾವಿಡ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.

‘‘ಭಾರತಕ್ಕೆ ಅದರಲ್ಲೂ ಮುಖ್ಯವಾಗಿ ಅಂಡರ್-19 ತಂಡ, ಶ್ರೇಷ್ಠ ಕೋಚ್ ಹಾಗೂ ಸಲಹೆಗಾರ ರಾಹುಲ್ ದ್ರಾವಿಡ್‌ಗೆ ಅಭಿನಂದನೆಗಳು. ಭವಿಷ್ಯದ ಸ್ಟಾರ್‌ಗಳು ರೂಪುಗೊಳ್ಳುತ್ತಿದ್ದಾರೆ’’ ಎಂದು ದ್ರಾವಿಡ್ ವಿರುದ್ಧ ಹಲವು ಪಂದ್ಯಗಳಲ್ಲಿ ಆಡಿರುವ ಅಫ್ರಿದಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News