×
Ad

ಫೋರ್ಬ್ಸ್ ಇಂಡಿಯಾ 30: ಅಂಡರ್ 30 ಪಟ್ಟಿಯಲ್ಲಿ ಬುಮ್ರಾ, ಹರ್ಮನ್‌ಪ್ರೀತ್‌ಗೆ ಸ್ಥಾನ

Update: 2018-02-05 21:12 IST

ಹೊಸದಿಲ್ಲಿ, ಫೆ.5: ಫೋರ್ಬ್ಸ್ ಇಂಡಿಯಾ 30 ಅಂಡರ್ 30 ಲೀಸ್ಟ್‌ನಲ್ಲಿ ಭಾರತದ ಕ್ರಿಕೆಟಿಗರಾದ ಜಸ್‌ಪ್ರಿತ್ ಬುಮ್ರಾ ಹಾಗೂ ಹರ್ಮನ್ ಪ್ರೀತ್ ಕೌರ್, ಭಾರತದ ಮಹಿಳಾ ಹಾಕಿ ತಂಡದ ಗೋಲ್‌ಕೀಪರ್ ಸವಿತಾ ಪೂನಿಯಾ ಹಾಗೂ ಶೂಟರ್ ಹೀನಾ ಸಿಧು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

 ಬಲಗೈ ವೇಗದ ಬೌಲರ್ ಬುಮ್ರಾ ಐಪಿಎಲ್‌ನಲ್ಲಿ ತನ್ನ ಛಾಪು ಮೂಡಿಸಿ ಕಳೆದ ಕೆಲವೇ ವರ್ಷಗಳಲ್ಲಿ ಕ್ಷಿಪ್ರ ಪ್ರಗತಿ ಸಾಧಿಸಿದ್ದಾರೆ. 2016ರಲ್ಲಿ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯ ಪ್ರವಾಸ ಕೈಗೊಂಡಾಗ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಪಾದಾರ್ಪಣೆ ಮಾಡಿದ್ದರು. ಕಳೆದ ತಿಂಗಳು ದಕ್ಷಿಣ ಆಫ್ರಿಕದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಪಂದ್ಯ ಆಡಿದ್ದರು.

ಬುಮ್ರಾ 2017ರ ಋತುವಿನಲ್ಲಿ 23 ಏಕದಿನ ಪಂದ್ಯಗಳಲ್ಲಿ 39 ವಿಕೆಟ್‌ಗಳನ್ನು ಉರುಳಿಸಿ ಮೂರನೇ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದರು. 11 ಟ್ವೆಂಟಿ-20 ಪಂದ್ಯಗಳಲ್ಲಿ 12 ವಿಕೆಟ್ ಬಾಚಿಕೊಂಡಿದ್ದರು. ಏಕದಿನ ಕ್ರಿಕೆಟ್ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವುದಕ್ಕೆ 2017ರ ಐಸಿಸಿ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಈತನಕ 32 ಟ್ವೆಂಟಿ-20 ಪಂದ್ಯಗಳನ್ನು ಆಡಿರುವ ಬುಮ್ರಾ ಒಟ್ಟು 40 ವಿಕೆಟ್‌ಗಳನ್ನು ಕಬಳಿಸಿ ಎರಡನೇ ಗರಿಷ್ಠ ವಿಕೆಟ್ ಪಡೆದ ಭಾರತದ ಆಟಗಾರನಾಗಿದ್ದಾರೆ.

2016ರ ಡಿಸೆಂಬರ್‌ನಲ್ಲಿ ಹರ್ಮನ್‌ಪ್ರೀತ್ ಆಸ್ಟ್ರೇಲಿಯದ ಬಿಗ್‌ಬ್ಯಾಶ್ ಲೀಗ್‌ನಲ್ಲಿ(ಬಿಬಿಎಲ್) ಭಾಗವಹಿಸಿದ ಭಾರತದ ಮೊದಲ ಮಹಿಳಾ ಕ್ರಿಕೆಟಿಗರಾಗಿದ್ದಾರೆ. ಕಳೆದ ವರ್ಷ ನಡೆದ ಮಹಿಳಾ ಕ್ರಿಕೆಟ್ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ 115 ಎಸೆತಗಳಲ್ಲಿ 171 ರನ್ ಗಳಿಸಿದ್ದರು.

ಶೂಟರ್ ಹೀನಾ ಸಿಧು 2017ರ ಋತುವಿನಲ್ಲಿ ಯಶಸ್ಸು ಸಾಧಿಸಿದ್ದರು. ಬ್ರಿಸ್ಬೇನ್‌ನಲ್ಲಿ ನಡೆದ ಕಾಮನ್‌ವೆಲ್ತ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 10 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು. ಹೀನಾ 2014ರಲ್ಲಿ ಅರ್ಜುನ ಪ್ರಶಸ್ತಿ ಪಡೆದಿದ್ದರು.

ಹಾಕಿ ತಂಡದ ಗೋಲ್‌ಕೀಪರ್ ಸವಿತಾ ಪೂನಿಯಾ ಕಳೆದ ವರ್ಷದ ಜಪಾನ್‌ನಲ್ಲಿ ಏಷ್ಯಾಕಪ್ ಜಯಿಸಿದ ಭಾರತ ತಂಡದ ಸದಸ್ಯೆಯಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News