ಆಫ್ರಿಕದಲ್ಲಿ ಭಾರತದ ಕ್ರಿಕೆಟ್ ತಂಡಗಳ ಕಾಕತಾಳೀಯ ಗೆಲುವು...!

Update: 2018-02-08 16:13 GMT

ಹೊಸದಿಲ್ಲಿ, ಫೆ.8: ದಕ್ಷಿಣ ಆಫ್ರಿಕದಲ್ಲಿ ಏಕದಿನ ಸರಣಿಯನ್ನು ಆಡುತ್ತಿರುವ ಪುರುಷರ ತಂಡ ದಕ್ಷಿಣ ಆಫ್ರಿಕ ವಿರುದ್ಧದ ಪಂದ್ಯದಲ್ಲಿ 303ಮತ್ತು ಮಹಿಳೆಯರ ಕ್ರಿಕೆಟ್ ತಂಡ 302 ರನ್‌ಗಳನ್ನು ದಾಖಲಿಸಿ ಅಪೂರ್ವ ಸಾಧನೆಗೆ ಸಾಕ್ಷಿಯಾಗಿತ್ತು.

ಎರಡೂ ಪಂದ್ಯಗಳು ನಡೆದಿರುವುದು ದಕ್ಷಿಣ ಆಫ್ರಿಕದಲ್ಲಿ ಎನ್ನುವುದು ವಿಶೇಷ. ಆಫ್ರಿಕದ ಕೇಪ್‌ಟೌನ್‌ನ ನ್ಯೂಲಾಂಡ್‌ನಲ್ಲಿ ಬುಧವಾರ  ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 303 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ 160 ರನ್ ಮತ್ತು ಶಿಖರ್ ಧವನ್ 76 ರನ್‌ಗಳ ನೆರವಿನಲ್ಲಿ ಭಾರತ ಕಠಿಣ ಸವಾಲು ವಿಧಿಸಿತ್ತು.

  304 ರನ್‌ಗಳ ಕಠಿಣ ಸವಾಲನ್ನು ಪಡೆದ ದಕ್ಷಿಣ ಆಫ್ರಿಕ ತಂಡ ಕುಲ್‌ದೀಪ್ ಯಾದವ್(23ಕ್ಕೆ 4) ಮತ್ತು ಯಜುವೇಂದ್ರ ಚಹಾಲ್(46ಕ್ಕೆ 4) ದಾಳಿಗೆ ಸಿಲುಕಿ 40 ಓವರ್‌ಗಳಲ್ಲಿ 179 ರನ್‌ಗಳಿಗೆ ಆಲೌಟಾಗಿತ್ತು. ಭಾರತ 124ರನ್‌ಗಳ ಭರ್ಜರಿ ಗೆಲುವಿನೊಂದಿಗೆ ಆರು ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದೆ. ಇನ್ನೊಂದು ಪಂದ್ಯ ಜಯಿಸಿದರೆ ಭಾರತಕ್ಕೆ ಸರಣಿಯನ್ನು 4-0 ಅಂತರದಲ್ಲಿ ವಶಪಡಿಸಿಕೊಳ್ಳಲು ಸಾಧ್ಯ.

 ಕಿಂಬರ್ಲಿಯಲ್ಲಿ ನಡೆದ ಮಹಿಳೆಯರ ಏಕದಿನ ಪಂದ್ಯದಲ್ಲಿ ಭಾರತ ಸೃತಿ ಮಂಧಾನ ಶತಕ(135) , ಹರ್ಮನ್‌ಪ್ರೀತ್ ಕೌರ್(ಔಟಾಗದೆ 55) ಮತ್ತು ವೇದಾ ಕೃಷ್ಣಮೂರ್ತಿ (ಔಟಾಗದೆ 51) ನೆರವಿನಲ್ಲಿ ನಿಗದಿತ 50 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 302 ರನ್ ಗಳಿಸಿತ್ತು.

     ಗೆಲುವಿಗೆ 303 ರನ್‌ಗಳ ಸವಾಲು ಪಡೆದ ದ. ಆಫ್ರಿಕ ತಂಡ 30.5 ಓವರ್‌ಗಳಲ್ಲಿ ಪೂನಮ್ ಯಾದವ್(24ಕ್ಕೆ 4) ದಾಳಿಗೆ ತತ್ತರಿಸಿ 124 ರನ್‌ಗಳಿಗೆ ಆಲೌಟಾಗಿತ್ತು. ಭಾರತ 178 ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಆಡಲು ಬಾಕಿ ಇರುವಾಗಲೇ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.

  ಕೊಹ್ಲಿ ಪಡೆ ಈ ಪಂದ್ಯದಲ್ಲಿ ಮಿಥಾಲಿ ತಂಡಕ್ಕಿಂತ 1 ರನ್ ಹೆಚ್ಚು ಸಂಪಾದಿಸಿತ್ತು. ಕೊಹ್ಲಿ ಪಡೆ ಮರ್ಕರಮ್ ತಂಡವನ್ನು 179ರನ್‌ಗಳಿಗೆ ನಿಯಂತ್ರಿಸಿ 124 ರನ್‌ಗಳ ಗೆಲುವು ಸಾಧಿಸಿತ್ತು. ಇದೇ ವೇಳೆ ಮಹಿಳಾ ತಂಡ ಎದುರಾಳಿ ಡಿ ವ್ಯಾನ್ ನೀಕೆರ್ಕ್ ತಂಡವನ್ನು 124 ರನ್‌ಗಳಿಗೆ ನಿಯಂತ್ರಿಸಿ 178 ರನ್‌ಗಳ ಗೆಲುವು ದಾಖಲಿಸಿರುವುದು ವಿಶೇಷ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News