ಟೆಸ್ಟ್, ಏಕದಿನ ಕ್ರಿಕೆಟ್‌ನಲ್ಲೂ ಭಾರತ ನಂ.1

Update: 2018-02-14 18:25 GMT

► ದಕ್ಷಿಣ ಆಫ್ರಿಕ ನೆಲದಲ್ಲಿ ಕೊಹ್ಲಿ ಪಡೆಯ ಮೊದಲ ಕೊಯ್ಲು

ಜೋಹಾನ್ಸ್‌ಬರ್ಗ್, ಫೆ.14: ದಕ್ಷಿಣ ಆಫ್ರಿಕ ದೇಶಕ್ಕೆ ಪ್ರವಾಸ ಕೈಗೊಳ್ಳಲು ಆರಂಭಿಸಿ 25 ವರ್ಷಗಳ ಬಳಿಕ ಟೀಮ್ ಇಂಡಿಯಾ ಮೊದಲ ಬಾರಿ ಸರಣಿ ಜಯಿಸಿ ಹೊಸ ಇತಿಹಾಸ ನಿರ್ಮಿಸಿದೆ.

 ಮಂಗಳವಾರ ನಡೆದ ಐದನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ 73 ರನ್‌ಗಳ ಜಯ ಗಳಿಸಿರುವ ಭಾರತ ತಂಡ ಆರು ಪಂದ್ಯಗಳ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಆಡಲು ಬಾಕಿ ಇರುವಾಗಲೇ 4-1 ಅಂತರದಲ್ಲಿ ಸರಣಿಯನ್ನು ಭದ್ರಪಡಿಸಿಕೊಂಡಿದೆ.

ಭಾರತ ಈ ಗೆಲುವಿನೊಂದಿಗೆ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ತಂಡದ ನಾಯಕ ವಿರಾಟ್ ಕೊಹ್ಲಿ ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಡರ್ಬನ್‌ನಲ್ಲಿ 6 ವಿಕೆಟ್‌ಗಳ ಜಯ, ಸೆಂಚೂರಿಯನ್‌ನಲ್ಲಿ 9 ವಿಕೆಟ್ ಮತ್ತು ಕೇಪ್‌ಟೌನ್‌ನಲ್ಲಿ 124 ರನ್‌ಗಳ ಜಯ ಗಳಿಸಿದ್ದ ಭಾರತಕ್ಕೆ ನಾಲ್ಕನೇ ಏಕದಿನ ಪಂದ್ಯದಲ್ಲಿ ಸೋಲಾಗಿತ್ತು. ಆದರೆ ಪೋರ್ಟ್‌ಎಲಿಝಬೆತ್‌ನಲ್ಲಿ 73 ರನ್‌ಗಳ ಭರ್ಜರಿ ಗೆಲುವಿನೊಂದಿಗೆ ಸರಣಿ ಗೆಲುವಿನ ಇತಿಹಾಸ ಬರೆದಿದೆ.

ಕೊಹ್ಲಿ ದಕ್ಷಿಣ ಆಫ್ರಿಕದಲ್ಲಿ ಏಕದಿನ ಸರಣಿ ಜಯಿಸಿದ ಭಾರತದ ಕ್ರಿಕೆಟ್ ತಂಡದ ಮೊದಲ ನಾಯಕ. ತಂಡದ ಯಶಸ್ಸಿನಲ್ಲಿ ಮಹತ್ವದ ಕೊಡುಗೆ ನೀಡಿರುವ ಕೊಹ್ಲಿ ಐದು ಪಂದ್ಯಗಳಲ್ಲಿ 429 ರನ್ ದಾಖಲಿಸಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು 1 ಅರ್ಧಶತಕವಿದೆ. ಬ್ಯಾಟಿಂಗ್‌ನಲ್ಲಿ ಕೊಹ್ಲಿ, ಬೌಲಿಂಗ್‌ನಲ್ಲಿ ಸ್ಪಿನ್ನರ್‌ಗಳಾದ ಯಜುವೇಂದ್ರ ಚಹಾಲ್ ಮತ್ತು ಕುಲ್‌ದೀಪ್ ಯಾದವ್ ತಂಡದ ಗೆಲುವಿಗೆ ಶ್ರಮಿಸಿದ್ದಾರೆ. ಯಾದವ್ 16 ವಿಕೆಟ್‌ಗಳನ್ನು ಮತ್ತು ಚಹಾಲ್ 14 ವಿಕೆಟ್‌ಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದ್ದಾರೆ.

 ಆರು ಬಾರಿ ಆಫ್ರಿಕ ಪ್ರವಾಸ ಕೈಗೊಂಡಿದ್ದ ಭಾರತ ಮೊದಲ ಬಾರಿ ಸರಣಿ ಗೆಲುವು ದಾಖಲಿಸಿದೆ. 1992ರಲ್ಲಿ ಆಫ್ರಿಕಕ್ಕೆ ಮೊದಲ ಬಾರಿ ಪ್ರವಾಸ ಕೈಗೊಂಡಿತ್ತು. ಆಫ್ರಿಕ 5-2 ಅಂತರದಲ್ಲಿ ಸರಣಿ ಗೆಲುವು ದಾಖಲಿಸಿತ್ತು. 1996-97ರಲ್ಲಿ 0-4, 2000-01ರಲ್ಲಿ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಭಾರತ ಸೋಲು ಅನುಭವಿಸಿತ್ತು. 2006-07ರಲ್ಲಿ 0-4, 2010-11ರಲ್ಲಿ 2-3 ಮತ್ತು 2013-14ರಲ್ಲಿ 0-2 ಅಂತರದಲ್ಲಿ ಭಾರತ ಸೋಲು ಅನುಭವಿಸಿತ್ತು. 2003ರಲ್ಲಿ ಸೌರವ್ ಗಂಗುಲಿ ನಾಯಕತ್ವದ ಟೀಮ್ ಇಂಡಿಯಾ ವಿಶ್ವಕಪ್ ಫೈನಲ್‌ನಲ್ಲಿ ಸೋತು ನಿರ್ಗಮಿಸಿತ್ತು. 2009ರ ಚಾಂಪಿಯನ್ಸ್ ಟ್ರೋಫಿಯಲ್ಲಿ ನಾಕೌಟ್ ಹಂತದಲ್ಲೇ ಸೋತು ಹೊರ ನಡೆದಿತ್ತು.

ದಕ್ಷಿಣ ಆಫ್ರಿಕ ತವರಿನಲ್ಲಿ ಈ ವರೆಗೆ ಏಳು ದ್ವಿಪಕ್ಷೀಯ ಸರಣಿಗಳಲ್ಲಿ ಸೋಲು ಅನುಭವಿಸಿದೆ. ಭಾರತ ವಿರುದ್ಧ 1-4 ಅಂತರದಲ್ಲಿ ಸೋಲು ಅನುಭವಿಸುವ ಮೊದಲು 6 ಸರಣಿಗಳನ್ನು ಕಳೆದುಕೊಂಡಿತ್ತು. ಒಂದು ಸರಣಿಯಲ್ಲಿ 4-4 ಸಮಬಲ ಸಾಧಿಸಿತ್ತು. ದಕ್ಷಿಣ ಆಫ್ರಿಕ ಸ್ವದೇಶದಲ್ಲಿ 42 ಏಕದಿನ ಸರಣಿಗಳನ್ನು ಗೆದ್ದುಕೊಂಡಿತ್ತು. ಇದೊಂದು ದಾಖಲೆಯಾಗಿದೆ.

 ಈ ಬಾರಿ ದಕ್ಷಿಣ ಆಫ್ರಿಕ ತಂಡವನ್ನು ಗಾಯಾಳುಗಳ ಸಮಸ್ಯೆ ಸತತವಾಗಿ ಕಾಡಿತ್ತು. ನಾಯಕ ಎಫ್ ಡು ಪ್ಲೆಸಿಸ್, ಎಬಿಡಿವಿಲಿಯರ್ಸ್‌, ಕ್ವಿಂಟನ್ ಡಿ ಕಾಕ್ ಗಾಯಾಳುವಾಗಿರುವ ಹಿನ್ನೆಲೆಯಲ್ಲಿ ಸರಣಿಯಲ್ಲಿ ಆಫ್ರಿಕ ಸಮಸ್ಯೆ ಎದುರಿಸಿದೆ.

 ಪ್ಲೆಸಿಸ್ ಮೊದಲ ಪಂದ್ಯದಲ್ಲಿ ಆಕರ್ಷಕ 120 ರನ್ ಗಳಿಸಿದರು. ತಂಡ ಸೋಲು ಅನುಭವಿಸಿತು. ಈ ಪಂದ್ಯದ ಬೆನ್ನಲ್ಲೇ ಅವರು ಗಾಯಗೊಂಡು ಸರಣಿಯಿಂದ ಹೊರಗುಳಿದರು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಡಿ ಕಾಕ್ ಎರಡನೇ ಏಕದಿನ ಪಂದ್ಯದ ವೇಳೆ ಗಾಯಗೊಂಡರು. ಡಿವಿಲಿಯರ್ಸ್‌ ನಾಲ್ಕನೇ ಏಕದಿನ ಪಂದ್ಯಕ್ಕೆ ವಾಪಸಾಗಿದ್ದರು. ಆದರೆ ಎರಡೂ ಪಂದ್ಯಗಳಲ್ಲಿ ಅವರು ಕಳಪೆ ಪ್ರದರ್ಶನ ನೀಡಿದರು. ಹಾಶಿಮ್ ಅಮ್ಲ ಐದು ಪಂದ್ಯಗಳಲ್ಲಿ 1 ಅರ್ಧಶತಕ ದಾಖಲಿಸಿದ್ದರು.

 ಆಫ್ರಿಕದ ದಾಂಡಿಗರು ಭಾರತದ ಸ್ಪಿನ್ನರ್‌ಗಳಿಗೆ ಹೆದರಿದ್ದಾರೆ. ಯಜುವೇಂದ್ರ ಚಹಾಲ್ ಮತ್ತು ಕುಲ್‌ದೀಪ್ ಯಾದವ್ ದಾಳಿಗೆ ಆಫ್ರಿಕ ತತ್ತರಿಸಿದೆ. 27ರ ಹರೆಯದ ಚಹಾಲ್ ಸರಣಿಯ 5 ಪಂದ್ಯಗಳಲ್ಲಿ 45ಕ್ಕೆ 2, 22ಕ್ಕೆ 5, 46ಕ್ಕೆ 4, 68ಕ್ಕೆ 1 ಮತ್ತು 43ಕ್ಕೆ 2 ವಿಕೆಟ್ ಉಡಾಯಿಸಿದ್ದಾರೆ.

  5ನೇ ಪಂದ್ಯದಲ್ಲಿ ಡೇವಿಡ್ ಮಿಲ್ಲರ್‌ರನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ ಕೇಥ್ ಅಥರ್ಟನ್ 1998-99ರಲ್ಲಿ ದಾಖಲಿಸಿದ್ದ 12 ವಿಕೆಟ್‌ಗಳ ದಾಖಲೆಯನ್ನು ಮುರಿದಿದ್ದಾರೆ. ಕುಲ್‌ದೀಪ್ ಯಾದವ್ ಅವರು ಚಹಾಲ್‌ರನ್ನು ಹಿಂದಿಕ್ಕಿದ್ದಾರೆ. ಪಂದ್ಯವೊಂದರಲ್ಲಿ 57ಕ್ಕೆ 4 ವಿಕೆಟ್ ಉಡಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News