ಕತರ್ ಓಪನ್: ವೋಝ್ನಿಯಾಕಿ, ಹಾಲೆಪ್ ಮೂರನೇ ಸುತ್ತಿಗೆ ಲಗ್ಗೆ

Update: 2018-02-15 18:21 GMT

ಕತರ್, ಫೆ.15: ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಕರೋಲಿನ್ ವೋಝ್ನಿಯಾಕಿ, ವಿಶ್ವದ ನಂ.1 ಆಟಗಾರ್ತಿ ಸಿಮೊನಾ ಹಾಲೆಪ್ ಕತರ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಡೆನ್ಮಾರ್ಕ್‌ನ ವೋಝ್ನಿಯಾಕಿ ಜರ್ಮನಿಯ ಕರಿನಾ ವಿಥಿಯೊಫ್ಟ್‌ರನ್ನು 6-2, 6-0 ಸೆಟ್‌ಗಳ ಅಂತರದಿಂದ ಮಣಿಸಿದರು.

ವೋಝ್ನಿಯಾಕಿ ಮುಂದಿನ ಸುತ್ತಿನಲ್ಲಿ 14ನೇ ಶ್ರೇಯಾಂಕದ ಮಗ್ಡಲೆನಾ ರಿಬಾರಿಕೋವಾರನ್ನು ಎದುರಿಸಲಿದ್ದಾರೆ.

ಕಳೆದ ತಿಂಗಳು ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ವೋಝ್ನಿಯಾಕಿ ವಿರುದ್ಧ ಸೋತ ಬಳಿಕ ಮೊದಲ ಟೂರ್ನಮೆಂಟ್ ಆಡಿದ ಹಾಲೆಪ್ ಒಂದು ಗಂಟೆ, 11 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ರಶ್ಯದ ಎಕಟೆರಿನಾ ಮಕರೋವಾರನ್ನು 6-3, 6-0 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.

 ಹಾಲೆಪ್ ಮುಂದಿನ ಸುತ್ತಿನಲ್ಲಿ ಅನಸ್ಟೇಸಿಜಾ ಸೇವಾಸ್ಟೋವಾರನ್ನು ಎದುರಿಸಲಿದ್ದಾರೆ. ಲಾಟ್ವಿಯದ ಸೇವಾಸ್ಟೋವಾ ಜಪಾನ್‌ನ ನಯೊಮಿ ಒಸಾಕಾರನ್ನು 6-4, 6-1 ಸೆಟ್‌ಗಳಿಂದ ಸೋಲಿಸಿದ್ದಾರೆ.

ಕಾರ್ಲಾ ಸುಯರೆಝ್ ನವಾರ್ರೊ ವಿರುದ್ಧ 6-2, 6-2 ಸೆಟ್‌ಗಳಿಂದ ಜಯ ಸಾಧಿಸಿರುವ ಜೋಹನ್ನಾ ಕಾಂಟಾ ಅಂತಿಮ-16ರ ಸುತ್ತು ತಲುಪಿದ್ದಾರೆ.

ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು ಪೊಲೆಂಡ್‌ನ ಅಗ್ನೆಸ್ಕಾ ರಾಂಡ್ವಾಂಸ್ಕಾರನ್ನು 6-7(3), 6-3, 6-4 ಸೆಟ್‌ಗಳಿಂದ ಸೋಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News