2019ರ ಐಸಿಸಿ ವಿಶ್ವಕಪ್ ಅರ್ಹತಾ ಟೂರ್ನಿಗೆ ನೇಪಾಳ ತೇರ್ಗಡೆ

Update: 2018-02-15 18:25 GMT

ದುಬೈ, ಫೆ.15: ಕೆನಡಾ ತಂಡವನ್ನು ಮಣಿಸಿರುವ ನೇಪಾಳ ಮುಂದಿನ ವರ್ಷ ನಡೆಯಲಿರುವ ಐಸಿಸಿ ವಿಶ್ವಕಪ್ ಅರ್ಹತಾ ಟೂರ್ನಿಗೆ ತೇರ್ಗಡೆಯಾಗಿದೆ. ನಮೀಬಿಯಾದಲ್ಲಿ ನಡೆದ ವರ್ಲ್ಡ್ ಕ್ರಿಕೆಟ್ ಲೀಗ್ ಡಿವಿಜನ್-2ರ ಗ್ರೂಪ್ ಹಂತದ ಪಂದ್ಯದಲ್ಲಿ ಗೆಲ್ಲಲು 195 ರನ್ ಗುರಿ ಪಡೆದಿದ್ದ ನೇಪಾಳ ತಂಡ ಬಾಲಂಗೋಚಿಗಳಾದ ಸಂದೀಪ್ ಹಾಗೂ ಕರಣ್ ಕೆಸಿ ಕೊನೆಯ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ ಸೇರಿಸಿದ 50 ರನ್ ನೆರವಿನಿಂದ ಕೊನೆಯ ಎಸೆತದಲ್ಲಿ ಗೆಲುವಿನ ರನ್ ದಾಖಲಿಸಿತು.

‘‘ನನಗೆ ಮಾತನಾಡಲು ಆಗುತ್ತಿಲ್ಲ. ಕೊನೆಯ ವಿಕೆಟ್‌ನಲ್ಲಿ 50 ರನ್ ಜೊತೆಯಾಟ ನಡೆಸಿದ ಕಾರಣ ನಾವು ಪಂದ್ಯ ಗೆಲ್ಲಲು ಸಾಧ್ಯವಾಗಿದೆ. ನಾವು ಕೆಲವು ವರ್ಷಗಳಿಂದ ಕಠಿಣ ಶ್ರಮಪಡುತ್ತಿದ್ದೇವೆ’’ ಎಂದು ನೇಪಾಳದ ನಾಯಕ ಪರಾಸ್ ಖಾಡ್ಕ ಹೇಳಿದ್ದಾರೆ.

ಐಪಿಎಲ್ ಫ್ರಾಂಚೈಸಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದಲ್ಲಿ ಸ್ಥಾನ ಪಡೆದಿರುವ ನೇಪಾಳದ ಮೊತ್ತ ಮೊದಲ ಆಟಗಾರ ಎನಿಸಿಕೊಂಡಿರುವ ಸಂದೀಪ್ 40 ರನ್‌ಗೆ 2 ವಿಕೆಟ್ ಕಬಳಿಸಿ ಮೊದಲು ಬ್ಯಾಟಿಂಗ್ ಮಾಡಿದ್ದ ಕೆನಡಾವನ್ನು 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 194 ರನ್‌ಗೆ ಕಡಿವಾಣ ಹಾಕಿದ್ದರು.

ನೇಪಾಳ ಒಂದು ಹಂತದಲ್ಲಿ 144 ರನ್‌ಗೆ 9 ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. 31 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳ ಸಹಿತ ಔಟಾಗದೆ 42 ರನ್ ಗಳಿಸಿದ ಕರಣ್, ನೇಪಾಳದ ಗೆಲುವಿನ ರೂವಾರಿಯಾದರು.

ನೇಪಾಳ ಈತನಕ ವಿಶ್ವಕಪ್‌ನ ಅರ್ಹತಾ ಪಂದ್ಯವನ್ನು ಆಡಿಲ್ಲ. ಮತ್ತೊಂದು ಪಂದ್ಯದಲ್ಲಿ ನಮೀಬಿಯಾ ತಂಡವನ್ನು 19 ರನ್‌ಗಳಿಂದ ಸೋಲಿಸಿರುವ ಯುಎಇ ತಂಡ ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಸ್ಥಾನ ಪಡೆದಿದೆ. 2015ರಲ್ಲಿ ಎಲ್ಲ ಆರು ಗ್ರೂಪ್ ಹಂತದ ಪಂದ್ಯಗಳನ್ನು ಸೋತಿರುವ ಯುಎಇ ತಂಡ ಸತತ ಎರಡನೇ ಬಾರಿ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿದೆ.

‘ಎ’ ಗುಂಪಿನ ಕ್ವಾಲಿಫೈಯರ್ ಪಂದ್ಯದಲ್ಲಿ ನೇಪಾಳ ತಂಡ ಪಪುವಾ ನ್ಯೂಗಿನಿ, ಐರ್ಲೆಂಡ್, ಹಾಲೆಂಡ್ ಹಾಗೂ ಎರಡು ಬಾರಿಯ ವಿಶ್ವಕಪ್ ಚಾಂಪಿಯನ್ ವೆಸ್ಟ್‌ಇಂಡೀಸ್‌ನೊಂದಿಗೆ ಸ್ಥಾನ ಪಡೆದಿದೆ. ಬಿ ಗುಂಪಿನಲ್ಲಿ ಯುಇಎ ತಂಡ ಝಿಂಬಾಬ್ವೆ, ಅಫ್ಘಾನಿಸ್ತಾನ, ಸ್ಕಾಟ್ಲೆಂಡ್ ಹಾಗೂ ಹಾಂಕಾಂಗ್ ತಂಡಗಳೊಂದಿಗೆ ಸ್ಥಾನ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News