ಭಾರತದ ಹಾಕಿಗೆ ಒಡಿಶಾ ಸರಕಾರ ಪ್ರಾಯೋಜಕತ್ವ

Update: 2018-02-15 18:27 GMT

ಹೊಸದಿಲ್ಲಿ, ಫೆ.15: ಭಾರತೀಯ ಹಾಕಿ ತಂಡ ಇದೇ ಮೊದಲ ಬಾರಿ ಒಡಿಶಾ ರಾಜ್ಯ ಸರಕಾರವನ್ನು ತನ್ನ ನೂತನ ಪ್ರಾಯೋಜಕರನ್ನಾಗಿ ಪಡೆದುಕೊಂಡಿದೆ. ಮುಂದಿನ ಐದು ವರ್ಷಗಳ ಕಾಲ ಹಾಕಿಗೆ ಪ್ರಾಯೋಜಕತ್ವ ನೀಡಲು ನಿರ್ಧರಿಸಿರುವ ಒಡಿಶಾ ಸರಕಾರ ಈ ಮೂಲಕ ಹಾಕಿಗೆ ಬೆಂಬಲ ನೀಡಲಿದೆ.

 ಇಲ್ಲಿ ಗುರುವಾರ ನಡೆದ ಭವ್ಯ ಕಾರ್ಯಕ್ರಮವೊಂದರಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಈ ಘೋಷಣೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಭಾರತದ ಪುರುಷರ ಹಾಗೂ ಮಹಿಳಾ ತಂಡದ ಆಟಗಾರರು, ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್(ಎಫ್‌ಐಎಚ್) ಹಾಗೂ ಐಒಎ ಅಧ್ಯಕ್ಷ ನರೇಂದ್ರ ಬಾತ್ರಾ, ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಸಹಿತ ಹಲವು ಗಣ್ಯರು ಭಾಗವಹಿಸಿದ್ದರು.

ಪುರುಷ, ಮಹಿಳಾ ಹಾಕಿ ಆಟಗಾರರು ಧರಿಸಲಿರುವ ಹೊಸ ಜರ್ಸಿಗಳಲ್ಲಿ ಪ್ರದರ್ಶಿಸಲ್ಪಡಲಿರುವ ಒಡಿಶಾ ಸರಕಾರದ ಲಾಂಛನವನ್ನು ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಯಿತು.

 ರಾಜ್ಯ ಸರಕಾರ ಹಾಕಿಗೆ ಎಷ್ಟು ಹಣ ನೀಡಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ‘‘ಒಡಿಶಾದಲ್ಲಿ ಹಾಕಿ ಎನ್ನುವುದು ಕ್ರೀಡೆಗಿಂತ ಮಿಗಿಲಾಗಿದ್ದು, ಅದೊಂದು ಜೀವನದ ಹಾದಿಯಾಗಿದೆ. ಅತ್ಯಂತ ಮುಖ್ಯವಾಗಿ ನಮ್ಮ ಬುಡಕಟ್ಟು ವಲಯಗಳಲ್ಲಿ ಮಕ್ಕಳು ಹಾಕಿ ಸ್ಟಿಕ್ಸ್ ಗಳೊಂದಿಗೆ ನಡೆಯಲು ಕಲಿಯುತ್ತಾರೆ. ಭಾರತದ ಶ್ರೇಷ್ಠ ಹಾಕಿ ಪ್ರತಿಭೆಗಳನ್ನು ಒಡಿಶಾ ನೀಡುತ್ತಿದೆ ಎನ್ನುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಇದೇ ಮೊದಲ ಬಾರಿ ರಾಜ್ಯ ಸರಕಾರ ಇತಿಮಿತಿಯೊಳಗೆ ಕ್ರೀಡೆಯನ್ನು ಉತ್ತೇಜಿಸದೇ ಭಾರತೀಯ ಹಾಕಿಯ ಬೆಳವಣಿಗೆಯಲ್ಲಿ ಕಾಣಿಕೆ ನೀಡಲು ಬಯಸಿದೆ. ಇದು ದೇಶಕ್ಕೆ ಒಡಿಶಾದ ಉಡುಗೊರೆಯಾಗಿದೆ’’ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದಾರೆ. ಒಡಿಶಾ ಹಾಕಿಯ ತೊಟ್ಟಿಲೆಂದು ಪ್ರಸಿದ್ದಿ ಪಡೆದಿದ್ದು, ಈ ರಾಜ್ಯವು ದಿಲಿಪ್ ಟಿರ್ಕಿ, ಇಗ್ನೇಸ್ ಟಿರ್ಕಿ ಹಾಗೂ ಲಝರಸ್ ಬಾರ್ಲಾರಂತಹ ಆಟಗಾರರನ್ನು ದೇಶಕ್ಕೆ ನೀಡಿದೆ.

ಭಾರತದ ಈಗಿನ ಹಾಕಿ ತಂಡದಲ್ಲಿ ಒಡಿಶಾದ ಬೀರೇಂದ್ರ ಲಾಕ್ರಾ, ಅಮಿತ್ ರೋಹಿದಾಸ್, ದೀಪ್ಸನ್ ಟಿರ್ಕಿ ಹಾಗೂ ನಮಿತಾ ಟೊಪ್ಪೊ ಅವರಿದ್ದಾರೆ. ಹಲವು ಉಪಕ್ರಮದ ಮೂಲಕ ಹಾಕಿಗೆ ಉತ್ತೇಜನ ನೀಡುತ್ತಿರುವ ಒಡಿಶಾ ಹಾಕಿ ಇಂಡಿಯಾ ಲೀಗ್‌ನಲ್ಲಿ ಕಳಿಂಗ ಲ್ಯಾನ್ಸರ್ಸ್‌ ತಂಡವನ್ನು ಕಣಕ್ಕಿಳಿಸಿದೆ.

ಒಡಿಶಾ ರಾಜಧಾನಿ ಭುವನೇಶ್ವರ 2014ರ ಚಾಂಪಿಯನ್ಸ್ ಟ್ರೋಫಿ ಹಾಗೂ ಕಳೆದ ವರ್ಷ ಹಾಕಿ ವಿಶ್ವ ಲೀಗ್ ಫೈನಲ್‌ನ ಆತಿಥ್ಯವನ್ನು ವಹಿಸಿಕೊಂಡಿತ್ತು. ಈ ವರ್ಷಾಂತ್ಯದಲ್ಲಿ ನಡೆಯಲಿರುವ ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್‌ನ ಆತಿಥ್ಯವನ್ನು ವಹಿಸಿಕೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News