ಭಾರತಕ್ಕೆ ಭೇಟಿ ನೀಡಲಿದೆ ಪಾಕ್ ಹಾಕಿ ತಂಡ

Update: 2018-02-15 18:28 GMT

ಕರಾಚಿ, ಫೆ.15: ಈ ವರ್ಷದ ನವೆಂಬರ್-ಡಿಸೆಂಬರ್‌ನಲ್ಲಿ ಭುವನೇಶ್ವರದಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್‌ನಲ್ಲಿ ಭಾಗವಹಿಸಲು ಪಾಕಿಸ್ತಾನ ತಂಡ ಭಾರತಕ್ಕೆ ಪ್ರಯಾಣಿಸಲಿದೆ.

ಉಭಯ ದೇಶಗಳ ನಡುವೆ ರಾಜಕೀಯ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ವಿಶ್ವಕಪ್‌ನಲ್ಲಿ ಆಡಲು ಭಾರತಕ್ಕೆ ಬರುವುದಿಲ್ಲ ಎಂಬ ವದಂತಿಗೆ ತೆರೆ ಬಿದ್ದಿದೆ. ಭಾರತ 2010ರಲ್ಲಿ ಹಾಕಿ ವಿಶ್ವಕಪ್ ಆತಿಥ್ಯ ವಹಿಸಿಕೊಂಡಿದ್ದಾಗ ಪಾಕ್ ಭಾಗವಹಿಸಿತ್ತು.

2014ರಲ್ಲಿ ಹಾಲೆಂಡ್‌ನ ಹೇಗ್‌ನಲ್ಲಿ ನಡೆದಿದ್ದ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಪಾಕ್ ವಿಫಲವಾಗಿತ್ತು. ಇದೀಗ ಪಾಕ್ ವಿಶ್ವಕಪ್‌ಗೆ ವಾಪಸಾಗುತ್ತಿರುವುದು ಆ ತಂಡಕ್ಕೆ ಹಾಗೂ ಏಷ್ಯಾ ಹಾಕಿಗೆ ಧನಾತ್ಮಕ ಸಂಕೇತವಾಗಿದೆ.

ಲಂಡನ್‌ನಲ್ಲಿ ನಡೆದ ಹಾಕಿ ವರ್ಲ್ಡ್ ಲೀಗ್ ಸೆಮಿ ಫೈನಲ್‌ನಲ್ಲಿ ಏಳನೇ ಸ್ಥಾನ ಪಡೆಯುವುದರೊಂದಿಗೆ ಪಾಕ್ ವಿಶ್ವಕಪ್‌ಗೆ ಅರ್ಹತೆ ಪಡೆದಿತ್ತು. ಭಾರತದಲ್ಲಿ ನ.28 ರಿಂದ ಡಿ.16ರ ತನಕ ಹಾಕಿ ವಿಶ್ವಕಪ್ ನಡೆಯಲಿದೆ. ಭಾರತ ಸ್ವದೇಶದಲ್ಲಿ ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದೆ. 1975ರಲ್ಲಿ ಚಿನ್ನದ ಪದಕವನ್ನು ಜಯಿಸಿರುವ ಭಾರತ ಆಬಳಿಕ ಚಿನ್ನ ಜಯಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News