ಐಪಿಎಲ್‌ನಲ್ಲಿ ಯಾರಿಗೂ ಬೇಡವಾದ ಗಪ್ಟಿಲ್‌ರಿಂದ ಟ್ವೆಂಟಿ-20ಯಲ್ಲಿ ಹೊಸ ದಾಖಲೆ

Update: 2018-02-16 09:35 GMT

ಈಡನ್‌ಪಾರ್ಕ್(ಆಸ್ಟ್ರೇಲಿಯ), ಫೆ.16: ಆಸ್ಟ್ರೇಲಿಯ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿ ದಾಖಲೆಯ ಶತಕ ಸಿಡಿಸಿದ ನ್ಯೂಝಿಲೆಂಡ್ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದರು.

ಇಂಗ್ಲೆಂಡ್, ಆಸ್ಟ್ರೇಲಿಯ ಒಳಗೊಂಡ ತ್ರಿಕೋನ ಟ್ವೆಂಟಿ-20 ಸರಣಿಯ ಫೈನಲ್‌ನಲ್ಲಿ 54 ಎಸೆತಗಳಲ್ಲಿ 9 ಸಿಕ್ಸರ್, 6 ಬೌಂಡರಿಗಳಿರುವ 105 ರನ್ ಗಳಿಸಿದ ಗಪ್ಟಿಲ್ ವೇಗದ ಶತಕ ಸಿಡಿಸಿದ ನ್ಯೂಝಿಲೆಂಡ್ ದಾಂಡಿಗನೆಂಬ ಕೀರ್ತಿಗೆ ಭಾಜನರಾಗುವುದರೊಂದಿಗೆ ತಮ್ಮದೇ ದೇಶದ ಮಾಜಿ ನಾಯಕ ಬ್ರೆಂಡನ್ ಮೆಕಲಮ್‌ರ ಎರಡು ಅಂತಾರಾಷ್ಟ್ರೀಯ ಟ್ವೆಂಟಿ-20 ದಾಖಲೆಗಳನ್ನು ಮುರಿದರು.

ಗಪ್ಟಿಲ್ ಕೇವಲ 49 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಮಾಜಿ ನಾಯಕ ಮೆಕಲಮ್(50)ದಾಖಲೆಯನ್ನು ಮುರಿದರು. ಕೇವಲ 35 ಎಸೆತಗಳಲ್ಲಿ ಶತಕ ಗಳಿಸಿರುವ ದಕ್ಷಿಣ ಆಫ್ರಿಕದ ಡೇವಿಡ್ ಮಿಲ್ಲರ್ ವೇಗದ ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್‌ಮನ್ ಆಗಿದ್ದಾರೆ.

ಟ್ವೆಂಟಿ-20 ಕ್ರಿಕೆಟ್ ಚರಿತ್ರೆಯಲ್ಲಿ ಗರಿಷ್ಠ ರನ್ ಗಳಿಸಿದ್ದ ಮೆಕಲಮ್‌ರ ಮತ್ತೊಂದು ದಾಖಲೆಯನ್ನು ಗಪ್ಟಿಲ್ ಮುರಿದಿದ್ದಾರೆ.

ಗಪ್ಟಿಲ್ 58 ರನ್ ಗಳಿಸುತ್ತಲ್ಲೇ ಮೆಕಲಮ್ ದಾಖಲೆಯನ್ನು(2,140 ರನ್)ಮುರಿದರು. ಗಪ್ಟಿಲ್ 73 ಟ್ವೆಂಟಿ-20 ಪಂದ್ಯಗಳಲ್ಲಿ 2,188 ರನ್ ಗಳಿಸಿದ್ದಾರೆ. 31ರ ಹರೆಯದ ಗಪ್ಟಿಲ್ 34.18ರ ಸರಾಸರಿಯಲ್ಲಿ 2 ಶತಕ ಹಾಗೂ 15 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಗಪ್ಟಿಲ್ 2018ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಬಿಕರಿಯಾಗದೇ ಉಳಿದಿರುವ ಪ್ರಮುಖ ಆಟಗಾರನಾಗಿದ್ದಾರೆ. ಚುಟುಕು ಪಂದ್ಯದಲ್ಲಿ 2ನೇ ಬಾರಿ ಶತಕ ಸಿಡಿಸಿರುವ ಗಪ್ಟಿಲ್ ತನ್ನಲ್ಲಿ ಇನ್ನೂ ಆಕ್ರಮಣಕಾರಿ ಆಟವಾಡುವ ಸಾಮರ್ಥ್ಯವಿದೆ ಎಂದು ತೋರಿಸಿಕೊಟ್ಟಿದ್ದಾರೆ.

ಗರಿಷ್ಠ ಟ್ವೆಂಟಿ-20 ರನ್ ಗಳಿಸಿರುವ ವಿಶ್ವದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಗಪ್ಟಿಲ್ ಹಾಗೂ ಮೆಕಲಮ್ ಮೊದಲೆರಡು ಸ್ಥಾನದಲ್ಲಿದ್ದಾರೆ. ಭಾರತದ ನಾಯಕ ವಿರಾಟ್ ಕೊಹ್ಲಿ(55 ಪಂದ್ಯ, 1,956 ರನ್) ಮೂರನೇ ಸ್ಥಾನದಲ್ಲಿದ್ದಾರೆ. ಗಪ್ಟಿಲ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ನ್ಯೂಝಿಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 243 ರನ್ ಗಳಿಸಿತು.ಟ್ವೆಂಟಿ-20 ಕ್ರಿಕೆಟ್‌ನ ಗರಿಷ್ಠ ಸ್ಕೋರ್ ದಾಖಲೆಯನ್ನು ಸರಿಗಟ್ಟಿತು.

 ಗಪ್ಟಿಲ್‌ಗೆ ಸಾಥ್ ನೀಡಿದ ಕಾಲಿನ್ ಮುನ್ರೊ(76 ರನ್, 33 ಎಸೆತ) 10.4 ಓವರ್‌ಗಳಲ್ಲಿ ಮೊದಲ ವಿಕೆಟ್‌ನಲ್ಲಿ 132 ರನ್ ಜೊತೆಯಾಟ ನಡೆಸಿದರು. ಮುನ್ರೊ ಕಳೆದ ತಿಂಗಳು ನಡೆದಿದ್ದ ಐಪಿಎಲ್ ಆಟಗಾರರ ಹರಾಜಿನಲ್ಲಿ 1.9 ಕೋ.ರೂ.ಗೆ ಡೆಲ್ಲಿ ಡೇರ್ ಡೆವಿಲ್ಸ್ ಪಾಲಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News