ಟ್ವೆಂಟಿ-20 ಕ್ರಿಕೆಟ್: ಗರಿಷ್ಠ ರನ್ ಚೇಸಿಂಗ್ ಮಾಡಿದ ಆಸ್ಟ್ರೇಲಿಯ ಹೊಸ ದಾಖಲೆ

Update: 2018-02-16 12:07 GMT

ಆಕ್ಲೆಂಡ್, ಫೆ.16: ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗೆಲ್ಲಲು ಗರಿಷ್ಠ ರನ್‌ನ್ನು ಯಶಸ್ವಿಯಾಗಿ ಬೆನ್ನಟ್ಟಿದ ಆಸ್ಟ್ರೇಲಿಯ ಹೊಸ ದಾಖಲೆ ನಿರ್ಮಿಸಿತು.

 ಶುಕ್ರವಾರ ಇಲ್ಲಿನ ಈಡನ್‌ಪಾರ್ಕ್‌ನಲ್ಲಿ ನಡೆದ ತ್ರಿಕೋನ ಸರಣಿ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಪಂದ್ಯದಲ್ಲಿ ಗೆಲ್ಲಲು 20 ಓವರ್‌ಗಳಲ್ಲಿ 244 ರನ್ ಗುರಿ ಪಡೆದ ಆಸ್ಟ್ರೇಲಿಯ ತಂಡ ಬ್ಯಾಟ್ಸ್‌ಮನ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಇನ್ನೂ ಐದು ಎಸೆತಗಳು ಬಾಕಿ ಇರುವಾಗಲೇ 5 ವಿಕೆಟ್ ನಷ್ಟದಲ್ಲಿ ಗೆಲುವಿನ ದಡ ಸೇರಿತು.

ಈ ಮೂಲಕ ಆಸ್ಟ್ರೇಲಿಯ ತಂಡ ವೆಸ್ಟ್‌ಇಂಡೀಸ್ ನಿರ್ಮಿಸಿದ್ದ ದಾಖಲೆಯನ್ನು ಪತನಗೊಳಿಸಿತು. 2015ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ವಿಂಡೀಸ್ ತಂಡ ದಕ್ಷಿಣ ಆಫ್ರಿಕ ವಿರುದ್ಧ 6 ವಿಕೆಟ್‌ಗಳ ನಷ್ಟಕ್ಕೆ 236 ರನ್ ಗಳಿಸಿ ಟ್ವೆಂಟಿ-20ಯಲ್ಲಿ ಗರಿಷ್ಠ ಸ್ಕೋರ್ ಚೇಸಿಂಗ್ ಮಾಡಿ ದಾಖಲೆ ನಿರ್ಮಿಸಿತ್ತು.

ಮೊದಲು ಬ್ಯಾಟಿಂಗ್ ಮಾಡಿದ್ದ ಕಿವೀಸ್ ತಂಡ ಮಾರ್ಟಿನ್ ಗಪ್ಟಿಲ್(105) ಹಾಗೂ ಕಾಲಿನ್ ಮುನ್ರೊ(76) ಮೊದಲ ವಿಕೆಟ್‌ಗೆ ಸೇರಿಸಿದ 132 ರನ್ ಜೊತೆಯಾಟದ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿತ್ತು.

ಗೆಲ್ಲಲು ಕಠಿಣ ಸವಾಲು ಪಡೆದ ಆಸೀಸ್‌ಗೆ ಡಿ’ಆರ್ಕಿ ಶಾರ್ಟ್(76,44 ಎಸೆತ) ಹಾಗೂ ಡೇವಿಡ್ ವಾರ್ನರ್(59,24 ಎಸೆತ) 8.3 ಓವರ್‌ಗಳಲ್ಲಿ 121 ರನ್ ಜೊತೆಯಾಟ ನಡೆಸಿ ಭದ್ರಬುನಾದಿ ಹಾಕಿಕೊಟ್ಟರು. ಗ್ಲೆನ್ ಮ್ಯಾಕ್ಸ್‌ವೆಲ್(31,14 ಎಸೆತ) ಹಾಗೂ ಆ್ಯರೊನ್ ಫಿಂಚ್(ಅಜೇಯ 36)ತಂಡವನ್ನು ಗೆಲುವಿನ ದಡ ಸೇರಿಸಿದರು.

ತ್ರಿಕೋನ ಸರಣಿಯಲ್ಲಿ ಈಗಾಗಲೇ ಮೂರು ಪಂದ್ಯಗಳನ್ನು ಜಯಿಸಿರುವ ಆಸ್ಟ್ರೇಲಿಯ ಫೆ.21ರ ಫೈನಲ್‌ಗೆ ಅರ್ಹತೆ ಪಡೆದಿದೆ.

ಈಡನ್‌ಪಾರ್ಕ್‌ನಲ್ಲಿ ರನ್ ಹೊಳೆ ಹರಿದಿದ್ದು ಉಭಯ ತಂಡಗಳು 38.5 ಓವರ್‌ಗಳಲ್ಲಿ ಒಟ್ಟು 488 ರನ್ ಗಳಿಸಿವೆ. ಕಿರಿದಾದ ಮೈದಾನದಲ್ಲಿ ಒಟ್ಟು 32 ಸಿಕ್ಸರ್ ಸಿಡಿಯಲ್ಪಟ್ಟಿದ್ದು, ಇದು ಟ್ವೆಂಟಿ-20 ಪಂದ್ಯದಲ್ಲಿ ದಾಖಲೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News