ಮಾಲ್ದೀವ್ಸ್ ಬಿಕ್ಕಟ್ಟು ಪರಿಹಾರದಲ್ಲಿ ಭಾರತ, ಇತರ ದೇಶಗಳಿಗೆ ಪಾತ್ರವಿಲ್ಲ: ಸಚಿವ

Update: 2018-02-16 16:54 GMT

ಮಾಲೆ (ಮಾಲ್ದೀವ್ಸ್), ಫೆ. 16: ಮಾಲ್ದೀವ್ಸ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಭಾರತ ಅಥವಾ ಇತರ ದೇಶಗಳಿಗೆ ಯಾವುದೇ ಪಾತ್ರವಿಲ್ಲ ಎಂದು ಮಾಲ್ದೀವ್ಸ್ ಸರಕಾರ ಗುರುವಾರ ಹೇಳಿದೆ.

ಬಂಧನದಲ್ಲಿರುವ ಪ್ರತಿಪಕ್ಷ ನಾಯಕರನ್ನು ಬಿಡುಗಡೆ ಮಾಡಬೇಕು ಹಾಗೂ ಪಕ್ಷಾಂತರ ಮಾಡಿರುವ ಆಡಳಿತಾರೂಢ ಪಕ್ಷದ ಸಂಸದರ ಸದಸ್ಯತ್ವವನ್ನು ಊರ್ಜಿತಗೊಳಿಸಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪಾಲಿಸಲು ನಿರಾಕರಿಸಿರುವ ಮಾಲ್ದೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದಾರೆ. ತುರ್ತು ಪರಿಸ್ಥಿತಿ ಹೇರಿದ ಬೆನ್ನಿಗೇ ಸರಕಾರದ ವಿರುದ್ಧ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಾಧೀಶರನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ನೆಲೆಸಿದೆ.

ಮಾಲ್ದೀವ್ಸ್‌ನಲ್ಲಿ ಚೀನಾದ ಹೆಚ್ಚುತ್ತಿರುವ ಆರ್ಥಿಕ ಉಪಸ್ಥಿತಿ ವಾಸ್ತವವಾಗಿದೆ ಎಂದು ದೇಶದ ಆರ್ಥಿಕ ಅಭಿವೃದ್ಧಿ ಸಚಿವ ಮುಹಮ್ಮದ್ ಸಯೀದ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ದೇಶದಲ್ಲಿ ನೆಲೆಸಿರುವ ರಾಜಕೀಯ ಬಿಕ್ಕಟ್ಟನ್ನು ಪರಿಹರಿಸಲು ಭಾರತ ಮತ್ತು ಇತರ ದೇಶಗಳು ಯಮೀನ್ ಸರಕಾರ ಮತ್ತು ಪ್ರತಿಪಕ್ಷದ ನಡುವೆ ಮಾತುಕತೆಯನ್ನು ಏರ್ಪಡಿಸಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘‘ಇದು ಆಂತರಿಕ ವ್ಯವಹಾರ. ನಮ್ಮ ಆಂತರಿಕ ವಿವಾದಗಳನ್ನು ನಮ್ಮಷ್ಟಕ್ಕೆ ಪರಿಹರಿಸಲು ನಾವು ಸಮರ್ಥರಾಗಿದ್ದೇವೆ. ಮಾಲ್ದೀವ್ಸ್ ಸ್ವತಂತ್ರ ದೇಶ ಹಾಗೂ ನಾವು ನಮ್ಮದೇ ಸಂವಿಧಾನವನ್ನು ಹೊಂದಿದ್ದೇವೆ. ನಮ್ಮದೇ ಸಂಸ್ಥೆಗಳನ್ನು ನಾವು ಹೊಂದಿದ್ದೇವೆ. ನಮಗೆ ನಮ್ಮದೆ ಆದ ಜನರಿದ್ದಾರೆ’’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News