ಗೆಲುವಿನ ನಾಗಾಲೋಟ ಮುಂದುವರಿಸುವತ್ತ ಕೊಹ್ಲಿ ಪಡೆ ಚಿತ್ತ

Update: 2018-02-17 18:23 GMT

ಜೋಹಾನ್ಸ್‌ಬರ್ಗ್, ಫೆ.17: ಏಕದಿನ ಸರಣಿಯನ್ನು ಜಯಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಭಾರತ ತಂಡ ರವಿವಾರ ದಕ್ಷಿಣ ಆಫ್ರಿಕ ವಿರುದ್ಧ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯ ಆಡಲಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಗೆ ಚಾಲನೆ ಸಿಗಲಿದೆ.

ಹರಿಣಗಳ ನಾಡಿನಲ್ಲಿ 25 ವರ್ಷಗಳ ಬಳಿಕ 5-1 ಅಂತರದಿಂದ ಏಕದಿನ ಸರಣಿಯನ್ನು ಜಯಿಸಿರುವ ಭಾರತ ಇತಿಹಾಸ ನಿರ್ಮಿಸಿದೆ. ಇದೀಗ ಟ್ವೆಂಟಿ-20 ಸರಣಿಯಲ್ಲೂ ಗೆಲುವಿನ ನಾಗಾಲೋಟವನ್ನು ಮುಂದುವರಿಸುವತ್ತ ಕೊಹ್ಲಿ ಪಡೆ ಚಿತ್ತವಿರಿಸಿದೆ.

ಹಿರಿಯ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಒಂದು ವರ್ಷದ ಬಳಿಕ ರಾಷ್ಟ್ರೀಯ ತಂಡಕ್ಕೆ ವಾಪಸಾಗಿದ್ದಾರೆ.

ಟೆಸ್ಟ್ ಸರಣಿ ಸೋಲಿನಿಂದ ಬೇಗನೇ ಚೇತರಿಸಿಕೊಂಡು ಏಕದಿನ ಸರಣಿ ಜಯಿಸಿರುವ ಭಾರತ ತಂಡ ಟ್ವೆಂಟಿ-20 ಸರಣಿ ಜಯಿಸುವ ಫೇವರಿಟ್ ತಂಡವಾಗಿದೆ. ಅವಳಿ ಸ್ಪಿನ್ನರ್‌ಗಳಾದ ಯಜುವೇಂದ್ರ ಚಹಾಲ್ ಹಾಗೂ ಕುಲ್‌ದೀಪ್ ಯಾದವ್ ಎದುರಾಳಿ ಆಫ್ರಿಕ ತಂಡವನ್ನು ಮತ್ತೊಮ್ಮೆ ಕಾಡಲು ತುದಿಗಾಲಲ್ಲಿ ನಿಂತಿದ್ದಾರೆ.

ದಕ್ಷಿಣ ಆಫ್ರಿಕ ನೆಲದಲ್ಲಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಭಾರತ ಸ್ಮರಣೀಯ ನೆನಪುಗಳನ್ನು ಹೊಂದಿದೆ. 2006ರಲ್ಲಿ ‘ಕಾಮನಬಿಲ್ಲಿನ ನಾಡಿ’ನಲ್ಲಿ ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಮೊತ್ತ ಮೊದಲ ಪಂದ್ಯವನ್ನು ಜಯಿಸಿದ್ದ ಭಾರತ ಮರು ವರ್ಷ 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಐತಿಹಾಸಿಕ ಐಸಿಸಿ ಟ್ವೆಂಟಿ-20 ವಿಶ್ವಕಪ್ ಜಯಿಸಿತು.

   2017ರ ಚಾಂಪಿಯನ್ಸ್ ಟ್ರೋಫಿಯ ಬಳಿಕ ಭಾರತ 10 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದು, ಈ ಪೈಕಿ ಏಳರಲ್ಲಿ ಜಯ ಸಾಧಿಸಿದೆ. ಟ್ವೆಂಟಿ-20 ಸರಣಿಯನ್ನಾಡಲು ರೈನಾ, ಕೆ.ಎಲ್.ರಾಹುಲ್ ಹಾಗೂ ಜೈದೇವ್ ಉನದ್ಕಟ್ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದಾರೆ. ಆರನೇ ಏಕದಿನ ಪಂದ್ಯ ಆರಂಭವಾಗುವ ಮೊದಲು ಶುಕ್ರವಾರ ಈ ಮೂವರು ಆಟಗಾರರು ಸೆಂಚೂರಿಯನ್‌ನಲ್ಲಿ 2 ಗಂಟೆಗಳ ಕಾಲ ಅಭ್ಯಾಸ ನಡೆಸಿದ್ದಾರೆ.

 ಸ್ವದೇಶದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಕಳೆದ ಟ್ವೆಂಟಿ-20 ಪಂದ್ಯದಲ್ಲಿ ಪ್ರಮುಖ ಇಬ್ಬರು ಆಟಗಾರರಾದ ನಾಯಕ ಕೊಹ್ಲಿ ಹಾಗೂ ಭುವನೇಶ್ವರ ಕುಮಾರ್‌ಗೆ ವಿಶ್ರಾಂತಿ ನೀಡಲಾಗಿತ್ತು. ಈ ಇಬ್ಬರ ಅನುಪಸ್ಥಿತಿಯಲ್ಲಿ ಶ್ರೇಯಸ್ ಅಯ್ಯರ್, ಮುಹಮ್ಮದ್ ಸಿರಾಜ್ ಹಾಗೂ ವಾಶಿಂಗ್ಟನ್ ಸುಂದರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆಗೈದಿದ್ದರು. ಈ ಮೂವರ ಪೈಕಿ ಈಗ ಅಯ್ಯರ್ ಮಾತ್ರ ಈಗಿನ ತಂಡದಲ್ಲಿದ್ದಾರೆ. ಅವರು ಆಡುವ 11ರ ಬಳಗದಲ್ಲಿ ಇರುತ್ತಾರೋ ಎಂದು ನಾಳೆ ಗೊತ್ತಾಗಲಿದೆ.

ಮುಂಬೈ ಯುವ ದಾಂಡಿಗ ಅಯ್ಯರ್ ಜೋಹಾನ್ಸ್ ಬರ್ಗ್ ಹಾಗೂ ಪೋರ್ಟ್ ಎಲಿಝಬೆತ್‌ನಲ್ಲಿ ಆಡಿರುವ 2 ಏಕದಿನಗಳಲ್ಲಿ 18 ಹಾಗೂ 20 ರನ್ ಗಳಿಸಿದ್ದರು.

ರೈನಾ ದೀರ್ಘ ಸಮಯದ ಬಳಿಕ ಭಾರತ ತಂಡಕ್ಕೆ ವಾಪಸಾಗಿದ್ದಾರೆ. 2005ರಿಂದ ರೈನಾ ಏಕದಿನ ಕ್ರಿಕೆಟ್ ಆಡಿಲ್ಲ. 12 ತಿಂಗಳ ಹಿಂದೆ ಇಂಗ್ಲೆಂಡ್ ವಿರುದ್ಧ ಕೊನೆಯ ಬಾರಿ ಟ್ವೆಂಟಿ-20 ಪಂದ್ಯ ಆಡಿದ್ದರು. ಆ ಸರಣಿಯಲ್ಲಿ 3 ಪಂದ್ಯಗಳಲ್ಲಿ ಒಟ್ಟು 104 ರನ್ ಗಳಿಸಿದ್ದ ಅವರು ಒಂದು ಅರ್ಧಶತಕ ದಾಖಲಿಸಿದ್ದಾರೆ.

 ರೈನಾ 2017ರ ಐಪಿಎಲ್‌ನಲ್ಲಿ ಗುಜರಾತ್ ತಂಡದ ಪರ 442 ರನ್ ಗಳಿಸಿದ್ದರೂ ಆಯ್ಕೆಗಾರರ ಮನ ಗೆಲ್ಲಲು ವಿಫಲರಾಗಿದ್ದರು. 2017-18ರಲ್ಲಿ ತವರಿನಲ್ಲಿ ನಡೆದ ಟ್ವೆಂಟಿ-20 ಸರಣಿಗೆ ನಿರ್ಲಕ್ಷಿಸಲ್ಪಟ್ಟಿದ್ದರು.

ಸೈಯದ್ ಮುಶ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತರಪ್ರದೇಶ ತಂಡದ ಪರ 9 ಪಂದ್ಯಗಳಲ್ಲಿ 314 ರನ್ ಗಳಿಸಿದ್ದ ರೈನಾ ಈ ಮೂಲಕ ಟ್ವೆಂಟಿ-20 ತಂಡಕ್ಕೆ ವಾಪಸಾಗಿದ್ದಾರೆ.

ವೇಗದ ಬೌಲರ್ ಜೈದೇವ್ ಉನದ್ಕಟ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಅಕ್ಟೋಬರ್‌ನಲ್ಲಿ ನ್ಯೂಝಿಲೆಂಡ್ ಪ್ರವಾಸ ಕೈಗೊಂಡ ಬಳಿಕ ಎಡಗೈ ವೇಗಿ 4 ಪಂದ್ಯಗಳಲ್ಲಿ ಅವಕಾಶ ಪಡೆದಿದ್ದಾರೆ. ಈ ವರ್ಷದ ಐಪಿಎಲ್ ಹರಾಜಿನಲ್ಲಿ 11.5 ಕೋ.ರೂ.ಗೆ ಹರಾಜಾಗುವ ಮೂಲಕ ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ.

ತಂಡಗಳು

► ಭಾರತ: ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ಸುರೇಶ್ ರೈನಾ, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್, ಎಂಎಸ್ ಧೋನಿ(ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಹಾಲ್, ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್, ಭುವನೇಶ್ವರಕುಮಾರ್, ಜಸ್‌ಪ್ರಿತ್ ಬುಮ್ರಾ, ಜೈದೇವ್ ಉನದ್ಕಟ್, ಶಾರ್ದೂಲ್ ಠಾಕೂರ್.

►ದಕ್ಷಿಣ ಆಫ್ರಿಕ: ಜೆ.ಪಿ. ಡುಮಿನಿ(ನಾಯಕ), ಫರ್ಹಾನ್ ಬೆಹರ್ದಿನ್, ಜೂನಿಯರ್ ಡಾಲಾ,ಎಬಿ ಡಿ ವಿಲಿಯರ್ಸ್, ರೀಝಾ ಹೆಂಡ್ರಿಕ್ಸ್, ಕ್ರಿಸ್ಟಿಯನ್ ಜಾಂಕರ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಕ್ರಿಸ್ ಮೊರಿಸ್, ಡೇನ್ ಪೀಟರ್ಸನ್, ಆ್ಯರೊನ್ ಫಾಂಗಿಸೊ, ಆ್ಯಂಡಿಲ್ ಫೆಹ್ಲುಕ್ವಾಯೊ, ತಬ್ರೈಝ್ ಶಂಸಿ, ಜಾನ್-ಜಾನ್ ಸ್ಮಟ್ಸ್.

ಪಂದ್ಯದ ಸಮಯ: ಸಂಜೆ 6:00 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News