ಪ್ಯಾರಾಲಿಫ್ಟಿಂಗ್ ವಿಶ್ವಕಪ್: ಸಕೀನಾ ಖತೂನ್‌ಗೆ ಬೆಳ್ಳಿ ಪದಕ

Update: 2018-02-18 16:41 GMT

ಕೋಲ್ಕತಾ, ಫೆ.18: ಭಾರತದ ಸಕೀನಾ ಖತೂನ್‌ ದುಬೈನಲ್ಲಿ ನಡೆದ ಪ್ಯಾರಾ ಪವರ್‌ಲಿಫ್ಟಿಂಗ್ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ಜಯಿಸಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ.

ಸಕೀನಾ ಖತೂನ್‌ 45 ಕೆಜಿ ತೂಕ ವಿಭಾಗದಲ್ಲಿ 80 ಕೆಜಿ ತೂಕ ಎತ್ತಿ ಹಿಡಿದರು. 2018ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಭಾರತ ತಂಡಕ್ಕೆ ತನ್ನನ್ನು ಸೇರಿಸಿಕೊಳ್ಳದೆ ಇರುವುದಕ್ಕೆ ಹತಾಶೆಗೊಂಡಿದ್ದ ಸಕೀನಾ ಕಳೆದ ತಿಂಗಳು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಕಚೇರಿ ಮುಂಭಾಗ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದರು.

ಆಸ್ಟ್ರೇಲಿಯದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯಲಿರುವ ಮುಂಬರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ಭಾರತದ ತಂಡಕ್ಕೆ ಪ್ಯಾರಾ ಪವರ್‌ಲಿಫ್ಟರ್ ಸಕೀನಾ ಆಯ್ಕೆಯಾಗಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಸಕಿನಾ ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದರು.

28ರ ಹರೆಯದ ಸಕೀನಾ ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಲೈಟ್‌ವೇಟ್ ವಿಭಾಗದಲ್ಲಿ ಕಂಚು ಜಯಿಸಿದ ಭಾರತದ ಏಕೈಕ ಪ್ಯಾರಾ-ಅಥ್ಲೀಟ್ ಎನಿಸಿಕೊಂಡಿದ್ದಾರೆ.

ಆ ಬಳಿಕ ಅವರನ್ನು ಪ್ರತಿಷ್ಠಿತ ಗೇಮ್ಸ್‌ಗಳಲ್ಲಿ ಆಯ್ಕೆಗೆ ಪರಿಗಣಿಸದೇ ನಿರ್ಲಕ್ಷಿಸಲಾಗಿತ್ತು.

ಸಕಿನಾ ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್ ನಿಗದಿಪಡಿಸಿದ ಮಾನದಂಡವನ್ನು ತಲುಪಿದ್ದರೂ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ.

ಒಂದೂವರೆ ವರ್ಷದ ಪ್ರಾಯದಲ್ಲಿ ಪೊಲಿಯೋ ಪೀಡಿತರಾಗಿದ್ದ ಸಕಿನಾ, ಪ್ರಧಾನಮಂತ್ರಿಗೆ ಪತ್ರ ಬರೆದು ಆದಷ್ಟು ಬೇಗನೆ ತಾವು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ದೇಶಕ್ಕೆ ಮತ್ತೊಂದು ಪದಕ ಗೆಲ್ಲುವ ಅವಕಾಶ ಕೊಡಬೇಕಾಗಿ ವಿನಂತಿಸಿದ್ದಾರೆ. 2018ರ ಕಾಮನ್‌ವೆಲ್ತ್ ಗೇಮ್ಸ್ ಎ.4 ರಿಂದ 15ರ ತನಕ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News