ಬಜೆಟ್ ನಲ್ಲಿ ಖರ್ಚಾಗದ ಹಣವನ್ನು ಪ್ರತಿಯೊಬ್ಬನಿಗೂ ಹಂಚಲಿದೆ ಈ ದೇಶ!

Update: 2018-02-19 17:20 GMT

ಸಿಂಗಾಪುರ, ಫೆ. 19: 2017ರ ಬಜೆಟ್‌ನಲ್ಲಿ ಸುಮಾರು 10 ಬಿಲಿಯ ಸಿಂಗಾಪುರ ಡಾಲರ್ (ಸುಮಾರು 49,161 ಕೋಟಿ ರೂಪಾಯಿ) ಖರ್ಚಾಗದೆ ಉಳಿದಿರುವ ಹಿನ್ನೆಲೆಯಲ್ಲಿ, 21 ವರ್ಷಕ್ಕಿಂತ ಹೆಚ್ಚಿನ ಎಲ್ಲ ಸಿಂಗಾಪುರ ಪ್ರಜೆಗಳಿಗೆ ತಲಾ 300 ಸಿಂಗಾಪುರ ಡಾಲರ್ (ಸುಮಾರು 14,750 ರೂಪಾಯಿ)ವರೆಗೆ ಬೋನಸ್ ನೀಡಲು ನಿರ್ಧರಿಸಲಾಗಿದೆ ಎಂದು ಹಣಕಾಸು ಸಚಿವ ಹೆಂಗ್ ಸ್ವೀ ಕಿಯಟ್ ಸೋಮವಾರ ಘೋಷಿಸಿದ್ದಾರೆ.

ಹಣಕಾಸು ಸಚಿವರು ಸಂಸತ್ತಿನಲ್ಲಿ ಮಾಡಿದ ಬಜೆಟ್ ಭಾಷಣದ ವೇಳೆ ಈ ಘೋಷಣೆಯನ್ನು ಮಾಡಿದರು.

 ‘‘ಸಿಂಗಾಪುರದ ಅಭಿವೃದ್ಧಿಯ ಫಲವನ್ನು ಅದರ ಪ್ರಜೆಗಳಿಗೆ ಹಂಚುವ ಸರಕಾರದ ಬದ್ಧತೆಯನ್ನು ಇದು ಪ್ರತಿಫಲಿಸುತ್ತದೆ’’ ಎಂದು ಸಚಿವರು ಹೇಳಿರುವುದಾಗಿ ‘ಚಾನೆಲ್ ನ್ಯೂಸ್ ಏಶ್ಯ’ ವರದಿ ಮಾಡಿದೆ.

ಈ ಬೋನಸ್ ನೀಡುವುದಕ್ಕಾಗಿ ಸರಕಾರಕ್ಕೆ 700 ಮಿಲಿಯ ಸಿಂಗಾಪುರ ಡಾಲರ್ (ಸುಮಾರು 3,441 ಕೋಟಿ ರೂಪಾಯಿ) ವೆಚ್ಚ ತಗಲುತ್ತದೆ.

ಜನರ ಲೆಕ್ಕಕ್ಕೆ ಸಿಗುವ ಆದಾಯಕ್ಕೆ ಅನುಸಾರವಾಗಿ ಬೋನಸ್ ನೀಡಲಾಗುತ್ತದೆ ಹಾಗೂ ಸುಮಾರು 27 ಲಕ್ಷ ಮಂದಿ ಇದನ್ನು ಪಡೆಯಲಿದ್ದಾರೆ.

 28,000 ಸಿಂಗಾಪುರ ಡಾಲರ್ (ಸುಮಾರು 13.76 ಲಕ್ಷ ರೂಪಾಯಿ)ಗಿಂತ ಕಡಿಮೆ ಆದಾಯವಿರುವವರು 300 ಸಿಂಗಾಪುರ ಡಾಲರ್ (ಸುಮಾರು 14,750 ರೂಪಾಯಿ) ಬೋನಸ್ ಪಡೆಯಲು ಅರ್ಹರಾಗುತ್ತಾರೆ. ಆದಾಯ ಹೆಚ್ಚುತ್ತಾ ಹೋದಂತೆ ಬೋನಸ್ ಮೊತ್ತ ಕಡಿಮೆಯಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News