ಚೀನಾದ ‘ಬೆಲ್ಟ್ ಮತ್ತು ರಸ್ತೆ ಯೋಜನೆ’ಗೆ 4 ದೇಶಗಳಿಂದ ಪರ್ಯಾಯ ಯೋಜನೆ

Update: 2018-02-19 17:39 GMT

ಸಿಡ್ನಿ (ಆಸ್ಟ್ರೇಲಿಯ), ಫೆ. 19: ಚೀನಾದ ಹಬ್ಬುತ್ತಿರುವ ಪ್ರಭಾವವನ್ನು ತಡೆಗಟ್ಟುವ ಪ್ರಯತ್ನವಾಗಿ, ಅದರ ‘ಬೆಲ್ಟ್ ಆ್ಯಂಡ್ ರೋಡ್’ ಯೋಜನೆಗೆ ಪರ್ಯಾಯವೆಂಬಂತೆ ಜಂಟಿ ಪ್ರಾದೇಶಿಕ ಮೂಲಸೌಕರ್ಯ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲು ಆಸ್ಟ್ರೇಲಿಯ, ಅಮೆರಿಕ, ಭಾರತ ಮತ್ತು ಜಪಾನ್ ಮುಂದಾಗಿವೆ.

ಅಮೆರಿಕದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಈ ವಿಷಯವನ್ನು ‘ಆಸ್ಟ್ರೇಲಿಯನ್ ಫೈನಾನ್ಶಿಯಲ್ ರಿವ್ಯೆ’ ವರದಿ ಮಾಡಿದೆ.

ಈ ನಾಲ್ಕು ದೇಶಗಳನ್ನು ಒಳಗೊಂಡ ಯೋಜನೆಯು ಈಗ ರೂಪುಗೊಳ್ಳುವ ಹಂತದಲ್ಲಷ್ಟೇ ಇದೆ, ಹಾಗಾಗಿ ಈ ವಾರದ ಆಸ್ಟ್ರೇಲಿಯ ಪ್ರಧಾನಿ ಮಾಲ್ಕಮ್ ಟರ್ನ್‌ಬುಲ್‌ರ ಅಮೆರಿಕ ಪ್ರವಾಸದ ವೇಳೆ ಅದನ್ನು ಘೋಷಿಸುವ ಸಾಧ್ಯತೆ ಇಲ್ಲ ಎಂದು ಅಧಿಕಾರಿ ಹೇಳಿದ್ದಾರೆ.

ಈ ಪ್ರವಾಸದ ವೇಳೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಟರ್ನ್‌ಬುಲ್ ನಡೆಸುವ ಮಾತುಕತೆಗಳ ಪಟ್ಟಿಯಲ್ಲಿ ಈ ವಿಷಯವೂ ಇದೆ ಹಾಗೂ ಆ ವಿಷಯದ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ ಎಂದರು.

‘‘ಚೀನಾ ಮೂಲಸೌಕರ್ಯಗಳನ್ನು ನಿರ್ಮಿಸಬಾರದೆಂದು ಯಾರೂ ಹೇಳುತ್ತಿಲ್ಲ. ಚೀನಾ ಒಂದು ಬಂದರನ್ನು ನಿರ್ಮಿಸಬಹುದು. ಆದರೆ, ಅದು ಅದರಷ್ಟಕ್ಕೆ ಆರ್ಥಿಕವಾಗಿ ಸಮರ್ಥವಾಗುವುದಿಲ್ಲ. ಬಂದರನ್ನು ಸಂಪರ್ಕಿಸುವ ರಸ್ತೆ ಅಥವಾ ರೈಲು ಮಾರ್ಗವನ್ನು ನಿರ್ಮಿಸುವ ಮೂಲಕ ನಾವು ಅದನ್ನು ಆರ್ಥಿಕವಾಗಿ ಸಮರ್ಥಗೊಳಿಸಬಹುದು’’ ಎಂದು ಅಮೆರಿಕದ ಅಧಿಕಾರಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News