ತೆಂಡುಲ್ಕರ್ ದಾಖಲೆ ಮುರಿದ ಮಯಾಂಕ್ ಅಗರ್ವಾಲ್

Update: 2018-02-27 17:45 GMT

ಹೊಸದಿಲ್ಲಿ, ಫೆ.27: ಕರ್ನಾಟಕದ ದಾಂಡಿಗ ಮಯಾಂಕ್ ಅಗರ್ವಾಲ್ ವಿಜಯ್ ಹಝಾರೆ ಟ್ರೋಫಿ ಟೂರ್ನಮೆಂಟ್‌ನಲ್ಲಿ ಗರಿಷ್ಠ ರನ್ ಗಳಿಸುವ ಮೂಲಕ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಅವರ 15 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

ಮಯಾಂಕ್ 2017-18ರ ಋತುವಿನ ಲೀಸ್ಟ್ ‘ಎ’ ಟೂರ್ನಿ ವಿಜಯ್ ಹಝಾರೆ ಟ್ರೋಫಿಯಲ್ಲಿ 8 ಪಂದ್ಯಗಳಲ್ಲಿ 723 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ 4 ಅರ್ಧಶತಕಗಳಿವೆ.

ಮಯಾಂಕ್ ಲೀಸ್ಟ್ ‘ಎ’ ಸರಣಿ ಅಥವಾ ಟೂರ್ನಿಯಲ್ಲಿ 700ಕ್ಕೂ ಅಧಿಕ ರನ್ ಗಳಿಸಿದ ಭಾರತದ ಮೊದಲ ದಾಂಡಿಗ ಎನಿಸಿಕೊಂಡಿದ್ದಾರೆ.

ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ 2003ರಲ್ಲಿ ದಕ್ಷಿಣ ಆಫ್ರಿಕದಲ್ಲಿ ನಡೆದ ಐಸಿಸಿ ವಿಶ್ವಕಪ್‌ನಲ್ಲಿ 11 ಪಂದ್ಯಗಳಲ್ಲಿ 673 ರನ್ ಗಳಿಸಿದ್ದರು. ಇದರಲ್ಲಿ 1 ಶತಕ ಹಾಗೂ 6 ಅರ್ಧಶತಕಗಳಿವೆ. ಇದು ಲೀಸ್ಟ್ ‘ಎ’ ಟೂರ್ನಿಯಲ್ಲಿ ದಾಖಲಾಗಿರುವ ಗರಿಷ್ಠ ವೈಯಕ್ತಿಕ ರನ್ ಆಗಿತ್ತು.

 ತೆಂಡುಲ್ಕರ್ ಬಳಿಕ ಭಾರತ ನಾಯಕ ವಿರಾಟ್ ಕೊಹ್ಲಿ ಸರಣಿಯಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ್ದರು. ಕೊಹ್ಲಿ ಇತ್ತೀಚೆಗೆ ಕೊನೆಗೊಂಡ ದಕ್ಷಿಣ ಆಫ್ರಿಕ ವಿರುದ್ಧ ಸರಣಿಯಲ್ಲಿ 558 ರನ್ ಗಳಿಸಿದ್ದರು. ಸರಣಿಯಲ್ಲಿ 3 ಶತಕ ಹಾಗೂ 1 ಅರ್ಧಶತಕ ಗಳಿಸಿದ್ದರು.

  ಈ ಋತುವಿನ ಎಲ್ಲ ಮಾದರಿ ಕ್ರಿಕೆಟ್‌ನಲ್ಲಿ 2,141 ರನ್ ಗಳಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ಸಾಧನೆ ಮಾಡಿರುವ ಮಯಾಂಕ್ ಲೀಸ್ಟ್ ‘ಎ’ ಟೂರ್ನಿ ಹಾಗೂ ವಿಜಯ್ ಹಝಾರೆ ಟ್ರೋಫಿಯಲ್ಲಿ ಗರಿಷ್ಠ ರನ್ ಗಳಿಸಿದ್ದಲ್ಲದೆ ಗರಿಷ್ಠ ಸಿಕ್ಸರ್(18)ಗಳನ್ನು ಸಿಡಿಸಿದ್ದಾರೆ. ವಿಜಯ್ ಹಝಾರೆ ಟ್ರೋಫಿಯಲ್ಲಿ ಮಯಾಂಕ್ 109, 84,28,102,89,140,81 ಹಾಗೂ 90 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News