ಭ್ರಷ್ಟಾಚಾರ ಪ್ರಕರಣ: ಪೊಲೀಸರಿಂದ ಇಸ್ರೇಲ್ ಪ್ರಧಾನಿ ನೆತನ್ಯಾಹು ವಿಚಾರಣೆ

Update: 2018-03-02 16:43 GMT

ಜೆರುಸಲೇಮ್, ಮಾ. 2: ಇಸ್ರೇಲ್‌ನ ಅತಿ ದೊಡ್ಡ ದೂರಸಂಪರ್ಕ ಕಂಪೆನಿ ಬೆಝೆಕ್‌ನ್ನು ಒಳಗೊಂಡ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಇಸ್ರೇಲ್ ಪೊಲೀಸರು ಪ್ರಧಾನಿ ಬೆಂಜಮಿನ್ ನೆತನ್ಯಾಹುರನ್ನು ಶುಕ್ರವಾರ ಮೊದಲ ಬಾರಿಗೆ ಪ್ರಶ್ನಿಸಿದರು ಎಂದು ಇಸ್ರೇಲ್ ರೇಡಿಯೊ ಹೇಳಿದೆ.

ಇನ್ನೂ ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ನೆತನ್ಯಾಹು ಶಾಮೀಲಾಗಿದ್ದಾರೆಂದು ಭಾವಿಸಲಾಗಿದ್ದು, ವಿಚಾರಣೆಯು ನಾಲ್ಕು ಅವಧಿಯ ಪ್ರಧಾನಿಯ ಸರಕಾರದ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಿವೆ.

‘ಕೇಸ್ 4000’ ಎಂಬುದಾಗಿ ಗುರುತಿಸಲ್ಪಟ್ಟಿರುವ ಹಾಲಿ ಪ್ರಕರಣದಲ್ಲಿ, ಬೆಝೆಕ್ ಇಸ್ರೇಲ್ ಟೆಲಿಕಾಂನ ಮಾಲೀಕರು ದೂರಸಂಪರ್ಕ ನಿಯಂತ್ರಣ ಸಂಸ್ಥೆಯಿಂದ ತಮಗೆ ಬೇಕಾದ ಪ್ರಯೋಜನಗಳನ್ನು ಪಡೆದುಕೊಂಡರು ಹಾಗೂ ಅದಕ್ಕೆ ಪ್ರತಿಯಾಗಿ ತಮ್ಮ ನಿಯಂತ್ರಣದಲ್ಲಿರುವ ಸುದ್ದಿ ವೆಬ್‌ಸೈಟ್‌ನಲ್ಲಿ ನೆತನ್ಯಾಹು ಮತ್ತು ಅವರ ಪತ್ನಿಗೆ ಉತ್ತಮ ಪ್ರಚಾರ ದೊರಕಿಸಿಕೊಟ್ಟರು ಎಂದು ಆರೋಪಿಸಲಾಗಿದೆ.

ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ವಾಹನವೊಂದು ಶುಕ್ರವಾರ ಬೆಳಗ್ಗೆ ಪ್ರಧಾನಿಯ ಅಧಿಕೃತ ನಿವಾಸಕ್ಕೆ ತೆರಳಿದೆ.

ಅದೇ ಸಮಯದಲ್ಲಿ ನೆತನ್ಯಾಹುರ ಪತ್ನಿ ಸಾರಾ ಟೆಲ್ ಅವೀವ್ ಸಮೀಪದ ಪೊಲೀಸ್ ಠಾಣೆಯೊಂದರಲ್ಲಿ ಹೇಳಿಕೆ ನೀಡುತ್ತಿದ್ದರು ಎಂದು ಇಸ್ರೇಲ್ ರೇಡಿಯೊ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News