×
Ad

12,000 ಕೋಟಿ ರೂ. ವಂಚಕ ನೀರವ್ ಅಮೆರಿಕದಲ್ಲಿದ್ದಾನೆಯೇ ಎಂಬ ಪ್ರಶ್ನೆಗೆ ಅಮೆರಿಕ ಉತ್ತರಿಸಿದ್ದು ಹೀಗೆ…

Update: 2018-03-02 22:41 IST

ವಾಶಿಂಗ್ಟನ್, ಮಾ. 2: ಭಾರತದಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕ್ (ಪಿಎನ್‌ಬಿ)ಗೆ 12,000 ಕೋಟಿ ರೂ. ಗೂ ಅಧಿಕ ಮೊತ್ತ ವಂಚಿಸಿ ಪರಾರಿಯಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿ ಅಮೆರಿಕದಲ್ಲಿದ್ದಾನೆ ಎಂಬ ಮಾಧ್ಯಮ ವರದಿಗಳನ್ನು ಅಮೆರಿಕ ಸರಕಾರ ಗಮನಿಸಿದೆ, ಆದರೆ ಆ ವರದಿಗಳನ್ನು ದೃಢಪಡಿಸಲು ಅಸಾಧ್ಯವಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರೊಬ್ಬರು ಶುಕ್ರವಾರ ಹೇಳಿದ್ದಾರೆ.

ಮೋದಿಯನ್ನು ಹುಡುಕುವಲ್ಲಿ ಭಾರತ ಸರಕಾರಕ್ಕೆ ನಿಮ್ಮ ಇಲಾಖೆಯು ನೆರವು ನೀಡುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ವಕ್ತಾರರು, ‘‘ಮೋದಿ ಕುರಿತ ತನಿಖೆಯಲ್ಲಿ ಭಾರತೀಯ ಅಧಿಕಾರಿಗಳಿಗೆ ಕಾನೂನು ನೆರವು ನೀಡುವ ಸಂಬಂಧದ ಪ್ರಶ್ನೆಗಳನ್ನು ನೀವು ಕಾನೂನು ಇಲಾಖೆಗೆ ಕೇಳಬಹುದಾಗಿದೆ’’ ಎಂದು ಪಿಟಿಐಗೆ ತಿಳಿಸಿದರು.

ಆದರೆ, ಮೋದಿ ಬಗ್ಗೆ ಹೇಳಿಕೆ ನೀಡಲು ಕಾನೂನು ಇಲಾಖೆ ನಿರಾಕರಿಸಿತು.

ಮೋದಿ ಮತ್ತು ಅವನ ಚಿಕ್ಕಪ್ಪ ಮೆಹುಲ್ ಚೋಕ್ಸಿ ಹಾಗೂ ಇತರರು ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ ಮುಂಬೈಯ ಬ್ರಾಡಿ ಹೌಸ್ ಶಾಖೆಯಿಂದ ಮೋಸದಿಂದ ‘ಲೆಟರ್ಸ್ ಆಫ್ ಅಂಡರ್‌ಟೇಕಿಂಗ್’ ಪಡೆದು ಇತರ ಬ್ಯಾಂಕ್‌ಗಳಿಂದ ವಿದೇಶಿ ಸಾಲಗಳನ್ನು ಪಡೆದುಕೊಂಡಿದ್ದರು. ಈ ಕೃತ್ಯದಲ್ಲಿ ಹಲವು ಬ್ಯಾಂಕ್ ಅಧಿಕಾರಿಗಳು ಶಾಕೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಮೋದಿ ಮತ್ತು ಚೋಕ್ಸಿ ತಮ್ಮ ಕುಟುಂಬದೊಂದಿಗೆ ಜನವರಿಯಲ್ಲಿ ದೇಶ ಬಿಟ್ಟು ಪಲಾಯನಗೈದ ಹಲವು ದಿನಗಳ ಬಳಿಕ ಈ ಬಗ್ಗೆ ಪಂಜಾಬ್ ನ್ಯಾಶನಲ್ ಬ್ಯಾಂಕ್ ಸಿಬಿಐಗೆ ದೂರು ನೀಡಿತ್ತು.

ಅಮೆರಿಕದ ಬ್ಯಾಂಕ್‌ಗಳಿಗೂ ಪಂಗನಾಮ

ಈ ನಡುವೆ, ಮೋದಿ ಒಡೆತನದ ‘ಫಯರ್‌ಸ್ಟಾರ್ ಡೈಮಂಡ್ ಇಂಕ್’ಗೆ ನೀಡಲಾಗಿರುವ ಸಾಲವನ್ನು ವಾಪಸ್ ಪಡೆಯದಂತೆ ಲೇವಾದೇವಿಗಾರರನ್ನು ನಿರ್ಬಂಧಿಸುವ ಮಧ್ಯಾಂತರ ತೀರ್ಪೊಂದನ್ನು ಅಮೆರಿಕದ ನ್ಯಾಯಾಲಯವೊಂದು ನೀಡಿದೆ.

ತಾನು ದಿವಾಳಿಯಾಗಿದ್ದೇನೆ ಎಂಬುದಾಗಿ ಘೋಷಿಸಬೇಕೆಂದು ಕೋರಿ ‘ಫಯರ್‌ಸ್ಟಾರ್ ಡೈಮಂಡ್ ಇಂಕ್’ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಈ ತೀರ್ಪು ಬಂದಿದೆ.

‘‘ಈ ತೀರ್ಪಿನ ಪ್ರಕಾರ, ಸಾಲ ನೀಡಿರುವ ಸಂಸ್ಥೆಗಳು ಸಾಲ ಪಡೆದಾತನಿಂದ ಸಾಲ ವಸೂಲು ಮಾಡಲು ಅಥವಾ ಸಾಲ ಪಡೆದಾತನ ಆಸ್ತಿಗಳನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ’’ ಎಂದು ದಿವಾಳಿ ನ್ಯಾಯಾಲಯ ತನ್ನ ಎರಡು ಪುಟಗಳ ಆದೇಶದಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News