ಸಿರಿಯದಲ್ಲಿ ನಿಲ್ಲದ ಬಾಂಬ್ ದಾಳಿ: ವಿಶ್ವಸಂಸ್ಥೆ ಕಳವಳ

Update: 2018-03-04 16:42 GMT

ವಿಶ್ವಸಂಸ್ಥೆ,ಮಾ.4: ಸಿರಿಯದಲ್ಲಿ ಮುಂದುವರಿದಿರುವ ಭೀಕರ ಸಂಘರ್ಷ, ಅದರಲ್ಲೂ ವಿಶೇಷವಾಗಿ ಪೂರ್ವಘೌಟಾದಲ್ಲಿ ನಿಲ್ಲದ ಬಾಂಬ್ ದಾಳಿಯ ಬಗ್ಗೆ ವಿಶ್ವಸಂಸ್ಥೆ ರವಿವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಅಮಾಯಕ ನಾಗರಿಕರು ಸಾಮೂಹಿಕವಾಗಿ ಶಿಕ್ಷಿಸಲ್ಪಡುವುದನ್ನು ಸ್ವಲ್ಪವೂ ಸಹಿಸಲು ಸಾಧ್ಯವೇ ಇಲ್ಲವೆಂದು ಅದು ಹೇಳಿದೆ.

ಯುದ್ಧಪೀಡಿತ ಸಿರಿಯದಲ್ಲಿ 30 ದಿನಗಳ ಕದನವಿರಾಮವನ್ನು ಏರ್ಪಡಿಸಲು ಆಗ್ರಹಿಸುವ ನಿರ್ಣಯವೊಂದನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಂಗೀಕರಿಸಿದ ಒಂದು ವಾರದ ಬಳಿಕ ಅದು ಈ ಹೇಳಿಕೆ ನೀಡಿದೆ.

30 ದಿನಗಳ ಕದನವಿರಾಮವನ್ನು ಆಗ್ರಹಿಸುವ ನಿರ್ಣಯ ಅಂಗೀಕರಿಸಿದ ಬಳಿಕ ಕೆಲವು ಪ್ರಕರಣಗಳಲ್ಲಿ ಹಿಂಸಾಚಾರ ಉಲ್ಬಣಿಸಿದೆಯೆಂದು ವಿಶ್ವಸಂಸ್ಥೆಯಪ್ರಾದೇಶಿಕ ಮಾನವೀಯ ಸೇವೆಗಳ ಸಮನ್ವಯಕಾರ ಪನೊಸ್ ಮೌಮ್ತಿಝಿಸ್ ತಿಳಿಸಿದ್ದಾರೆ. ಪೂರ್ವ ಘೌಟಾ ಪ್ರಾಂತದಲ್ಲಿ ಫೆಬ್ರವರಿ 18ರಿಂದೀಚೆಗೆ ನಿರಂತರವಾಗಿ ನಡೆಯುತ್ತಿರುವ ಬಾಂಬ್ ದಾಳಿಯಿಂದ ನೂರಾರು ಮಂದಿಯ ಮಾರಣಹೋಮ ನಡೆದಿರುವುದನ್ನು ಪ್ರಸ್ತಾಪಿಸುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ.

 ‘‘ ಕದನವಿರಾಮಕ್ಕಾಗಿ ಆಗ್ರಹಿಸುವ ನಿರ್ಣಯವನ್ನು ಮಂಡಿಸಿದ ಬಳಿಕ ತಾತ್ಕಾಲಿಕವಾದ ನಿರಾಳತೆ ದೊರೆಯುವ ಬದಲು ನಾವು ಇನ್ನಷ್ಟು ಭೀಕರ ಕದನಗಳನ್ನು, ಇನ್ನೂ ಹೆಚ್ಚಿನ ಸಾವುನೋವುಗಳನ್ನು ಕಾಣುತ್ತಿದ್ದೇವೆ. ಹಸಿವಿನಿಂದ ಜನತೆ ತತ್ತರಿಸುತ್ತಿರುವ ಹಾಗೂ ಆಸ್ಪತ್ರೆಗಳ ಮೇಲೂ ಬಾಂಬ್ ದಾಳಿಗಳು ನಡೆಯುತ್ತಿರುವ ವರದಿಗಳು ಬರುತ್ತಿವೆ’’ ಎಂದು ಹೇಳಿಕೆ ತಿಳಿಸಿದೆ.

ಪೂರ್ವ ಘೌಟಾ ಪ್ರಾಂತದಲ್ಲಿ ರಶ್ಯ ಬೆಂಬಲಿತ ಸಿರಿಯ ಪಡೆಗಳು ಹಾಗೂ ಬಂಡುಕೋರರ ನಡುವೆ ಭುಗಿಲೆದ್ದಿರುವ ಭೀಕರ ಕಾಳದ ನಡುವೆ ಸಿಕ್ಕಿಹಾಕಿಕೊಂಡಿದ್ದ 150 ಮಂದಿ ಮಕ್ಕಳು ಸೇರಿದಂತೆ ಕನಿಷ್ಠ 674 ಮಂದಿ ಈಗ ಸಾವನ್ನಪ್ಪಿದ್ದಾರೆಂದು ಭಾವಿಸಲಾಗಿದೆ.

 ಪೂರ್ವ ಘೌಟಾ ಪ್ರಾಂತದಲ್ಲಿ ಈಗ ಆಹಾರ ಮತ್ತಿತರ ಅವಶ್ಯ ಸಾಮಗ್ರಿಗಳ ಕೊರತೆಯುಂಟಾಗಿದ್ದು, ಸಾವಿರಾರು ಮಂದಿ ಹಸಿವಿನಿಂದ ಬಾಧಿತರಾಗಿದ್ದಾರೆ. ಮಾನವೀಯ ನೆರವನ್ನು ಒದಗಿಸುವುದಕ್ಕಾಗಿ ಸಂತ್ರಸ್ತ ನಾಗರಿಕರನ್ನು ಸಂಪರ್ಕಿಸಲು ತನಗೆ ಅವಕಾಶ ನೀಡಬೇಕೆಂದು ವಿಶ್ವಸಂಸ್ಥೆ ಪದೇ ಪದೇ ಮಾಡಿದ ಮನವಿಯನ್ನು ಸಿರಿಯ ಆಡಳಿತ ತಿರಸ್ಕರಿಸಿದೆ.

ಪೂರ್ವ ಘೌಟಾ ಪ್ರಾಂತದಲ್ಲಿ ಸಿರಿಯದ ಸರಕಾರಿ ಪಡೆಗಳು ಶೇ.10ರಷ್ಟು ಭಾಗವನ್ನು ತನ್ನ ವಶಕ್ಕೆ ತೆಗೆದುಕೊಂಡಿವೆ ಎಂದು ಮಾನವಹಕ್ಕುಗಳ ಸಿರಿಯ ವೀಕ್ಷಣಾಲಯ ಶನಿವಾರ ತಿಳಿಸಿದೆ.

ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಅವರಿಗೆ ನಿಷ್ಠವಾಗಿರುವ ಪಡೆಗಳು ಪೂರ್ವ ಭಾಗದ ನಾಲ್ಕು ಪ್ರದೇಶಗಳನ್ನುಹಾಗೂ ಎರಡು ವಾಯುನೆಲೆಗಳನ್ನು ಮರುಸ್ವಾಧೀನ ಪಡಿಸಿಕೊಂಡಿರುವುದಾಗಿ ಬ್ರಿಟನ್ ಮೂಲದ ಈ ಕಣ್ಗಾವಲು ಸಂಸ್ಥೆ ತಿಳಿಸಿದೆ.

 ಸರಕಾರಿ ಪಡೆಗಳು ಮತ್ತದರ ಮಿತ್ರಪಡೆಗಳು ಕಳೆದ 48 ತಾಸುಗಳಲ್ಲಿ ಬಂಡುಕೋರರ ನೆಲೆಗಳ ಮೇಲೆ ತಮ್ಮ ದಾಳಿಯನ್ನು ತೀವ್ರಗೊಳಿಸಿರುವುದಾಗಿ ಮಾನವಹಕ್ಕುಗಳ ಸಿರಿಯ ವೀಕ್ಷಣಾಲಯ ವಕ್ತಾರ ರಾಮಿ ಅಬ್ದೆಲ್ ರಹ್ಮಾನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News