ಅನಿರ್ದಿಷ್ಟಾವಧಿ ಅಧ್ಯಕ್ಷನಾಗಲು ಪ್ರಯತ್ನ: ಸೂಚನೆ ನೀಡಿದ ಟ್ರಂಪ್

Update: 2018-03-04 16:55 GMT

ವಾಶಿಂಗ್ಟನ್, ಮಾ.4: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಅಧ್ಯಕ್ಷೀಯ ಅಧಿಕಾರವನ್ನು ಎರಡು ಅವಧಿಗೆ ಸೀಮಿತಗೊಳಿಸುವುದನ್ನು ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ರದ್ದುಪಡಿಸುವ ಮೂಲಕ ಅವರಿಗೆ ಅನಿರ್ದಿಷ್ಟಾವಧಿಗೆ ಅಧ್ಯಕ್ಷರಾಗಿ ಮುಂದುವರಿಯಲು ಅವಕಾಶ ನೀಡಿರುವುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶಂಸಿಸಿದ್ದಾರೆ. ಕ್ಸಿ ಅವರನ್ನು ಪ್ರಶಂಸಿಸಿರುವ ಟ್ರಂಪ್ ಭಾಷಣದ ಧ್ವನಿಮುದ್ರಣವನ್ನು ಅದು ಶನಿವಾರ ಪ್ರಸಾರ ಮಾಡಿದೆ.

‘‘ಕ್ಸಿ ಅವರು ಅಜೀವಪರ್ಯಂತ ಅಧ್ಯಕ್ಷರಾಗಿ ಮುಂದುವರಿಯಬಹುದಾಗಿದೆ. ಅವರೊಬ್ಬ ಮಹಾನ್ ವ್ಯಕ್ತಿ’’ ಎಂದು ಟ್ರಂಪ್ ಫ್ಲೋರಿಡಾದಲ್ಲಿ ಪಕ್ಷದ ನಿಧಿ ಸಂಗ್ರಹಣಾ ಕಾರ್ಯಕ್ರಮವೊಂದರಲ್ಲಿ ಆಡಿದ ಮಾತುಗಳ ಧ್ವನಿಮುದ್ರಣವನ್ನು ಸಿಎನ್‌ಎನ್ ಪ್ರಸಾರ ಮಾಡಿದೆ.

‘‘ನೋಡಿ, ಅವರಿಗೆ (ಕ್ಸಿ) ಹಾಗೆ ಮಾಡಲು ಸಾಧ್ಯವಾಗಿದೆ. ಅದೊಂದು ದೊಡ್ಡ ಸಾಧನೆಯೆಂದು ನಾನು ಭಾವಿಸುತ್ತೇನೆ. ಬಹುಶಃ ನಮಗೂ ಕೂಡಾ ಒಂದಲ್ಲ ಒಂದು ದಿನ ಹಾಗೆ ಮಾಡಲು ಸಾಧ್ಯವಾಗಲಿದೆ’’ ಎಂದು ಟ್ರಂಪ್ ತನ್ನ ಬೆಂಬಲಿಗರ ಚಪ್ಪಾಳೆ ಹಾಗೂ ಹರ್ಷೋದ್ಗಾರಗಳ ನಡುವೆ ಹೇಳಿದ್ದರು.

ಆದಾಗ್ಯೂ, ಅಮೆರಿಕ ಅಧ್ಯಕ್ಷೀಯ ಅವಧಿಯನ್ನು ವಿಸ್ತರಿಸಬೇಕೆಂಬ ಆಶಯದೊಂದಿಗೆ 71 ವರ್ಷ ವಯಸ್ಸಿನ ಟ್ರಂಪ್ ಅವರು ಹೀಗೆ ಹೇಳಿದ್ದಾರೆಂದು ಸ್ಪಷ್ಟವಾಗಿಲ್ಲವೆಂದು ಸಿಎನ್‌ಎನ್ ಅಭಿಪ್ರಾಯಿಸಿದೆ. ಆದರೆ ಈ ಬಗ್ಗೆ ಶ್ವೇತಭವನದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

 ಈ ಮಧ್ಯೆ ಟ್ರಂಪ್ ಅವರ ಹೇಳಿಕೆಗೆ ಅಮೆರಿಕದ ಡೆಮಾಕ್ರಾಟ್ ಪ್ರತಿನಿಧಿ ರೊ ಖಾನ್ನಾ ಅವರಿಂದ ವಿರೋಧ ವ್ಯಕ್ತವಾಗಿದೆ. ‘‘ ಕ್ಸಿಜಿನ್‌ಪಿಂಗ್ ಅವರ ಅಧ್ಯಕ್ಷೀಯ ಅವಧಿಯನ್ನು ಜೀವನಪರ್ಯಂತಕ್ಕೆ ವಿಸ್ತರಿಸಿರುವುದನ್ನು ಪ್ರಶಂಸಿಸುವ ಮೂಲಕ ಅಮೆರಿಕ ಅಧ್ಯಕ್ಷರು ಅಮೆರಿಕಕ್ಕೆ ತಕ್ಕುದಲ್ಲದ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಟ್ರಂಪ್ ಅವರ ಈ ಮಾತಿನಿಂದ ಜಾರ್ಜ್ ವಾಶಿಂಗ್ಟನ್ ಅವರ ಶವವು ತನ್ನ ಗೋರಿಯಲ್ಲಿ ಮಗ್ಗುಲು ಬದಲಾಯಿಸಲಿದೆ’’ ಎಂದು ಕಟಕಿಯಾಡಿದ್ದಾರೆ.

 1932ರಿಂದ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಫ್ರಾಂಕ್ಲಿನ್ ರೂಸ್‌ವೆಲ್ಟ್ ಸತತ ನಾಲ್ಕು ಅವಧಿಗೆ ಕಾರ್ಯನಿರ್ವಹಿಸಿದ್ದರು. ಆನಂತರ 1951ರಲ್ಲಿ ಅಮೆರಿಕದ ಸಂವಿಧಾನದಲ್ಲಿ ತಿದ್ದುಪಡಿಯನ್ನು ತಂದು, ಅಮೆರಿಕ ಅಧ್ಯಕ್ಷರ ಗರಿಷ್ಠ ಅಧಿಕಾರಾವಧಿಯನ್ನು ತಲಾ ನಾಲ್ಕು ವರ್ಷಗಳ ಎರಡು ಅವಧಿಗೆ ಸೀಮಿತಗೊಳಿಸಲಾಗಿತ್ತು..

ಆದರೆ ಅಧ್ಯಕ್ಷರ ಸೇವಾವಧಿಯನ್ನು ಎರಡು ಅವಧಿಗಳಿಗೆ ಸೀಮಿತಗೊಳಿಸುವುದನ್ನು ರದ್ದುಪಡಿಸುವ ಕಾನೂನನ್ನು ಜಾರಿಗೊಳಿಸಬೇಕಾದರೆ ಅಮೆರಿಕ ಕಾಂಗ್ರೆಸ್‌ನ ಉಭಯಸದನಗಳಲ್ಲಿ ಮೂರನೆ ಎರಡರಷ್ಟು ಬೆಂಬಲವನ್ನು ಪಡೆಯಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News