ಯುರೋಪ್ ಒಕ್ಕೂಟದ ಕಾರುಗಳಿಗೆ ದುಬಾರಿ ತೆರಿಗೆ: ಟ್ರಂಪ್ ವಾಣಿಜ್ಯ ಸಮರದ ಎಚ್ಚರಿಕೆ

Update: 2018-03-04 17:41 GMT

 ವಾಶಿಂಗ್ಟನ್,ಮಾ.4: ಉಕ್ಕು ಹಾಗೂ ಆಲ್ಯುಮಿನಿಯಂ ಉತ್ಪನ್ನಗಳ ಮೇಲಿನ ಸುಂಕ ವಿಧಿಸುವ ತನ್ನ ಪ್ರಸ್ತಾವವನ್ನು ಯುರೋಪ್ ಒಕ್ಕೂಟವು ವಿರೋಧಿಸಿದಲ್ಲಿ ತಾನು ಯುರೋಪ್‌ನಿಂದ ಆಮದಾಗುವ ಕಾರುಗಳ ಮೇಲೆ ಹೊಸ ತೆರಿಗೆಯನ್ನು ವಿಧಿಸು ವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಘೋಷಿಸುವ ಮೂಲಕ ವಾಣಿಜ್ಯ ಸಮರದ ಬೆದರಿಕೆಯೊಡ್ಡಿದ್ದಾರೆ.

 ಅಮೆರಿಕಕ್ಕೆ ಆಮದಾಗುವ ಉಕ್ಕಿನ ಉತ್ಪನ್ನಗಳ ಮೇಲೆ ಶೇ.25 ಹಾಗೂ ಆಲ್ಯುಮಿನಿಯಂ ಉತ್ಪನ್ನಗಳ ಮೇಲೆ ಶೇ.10 ಆಮದು ಸುಂಕವನ್ನು ವಿಧಿಸುವುದಾಗಿ ಟ್ರಂಪ್ ಗುರುವಾರ ಘೋಷಿಸಿದ್ದರು. ತನ್ನ ಈ ಕ್ರಮವು ಅಮೆರಿಕದ ಸ್ವದೇಶಿ ಉದ್ಯಮಗಳಿಗೆ ಉತ್ತೇಜನ ನೀಡಲಿದೆಯೆಂದು ಅವರು ಪ್ರತಿಪಾದಿಸಿದ್ದರು.

 ಆದರೆ ಯುರೋಪ್ ಒಕ್ಕೂಟ ಸೇರಿದಂತೆ ಅಮೆರಿಕದ ವಾಣಿಜ್ಯ ಪಾಲುದಾರರು ಟ್ರಂಪ್‌ರ ಈ ಕ್ರಮವನ್ನು ವಿರೋಧಿಸಿದ್ದರು ಹಾಗೂ ಇದು ವಾಣಿಜ್ಯ ಸಮರದ ಕಿಡಿಯನ್ನು ಹಚ್ಚಲಿದೆಯೆಂದು ಆತಂಕ ವ್ಯಕ್ತಪಡಿಸಿದ್ದರು.

ಒಂದು ವೇಳೆ ಟ್ರಂಪ್ ಆಡಳಿತವು ಆಮದಿತ ಉಕ್ಕು ಹಾಗೂ ಆಲ್ಯುಮಿನಿಯಂ ಉತ್ಪನ್ನಗಳಿಗೆ ಸುಂಕ ವಿಧಿಸಿದಲ್ಲಿ, ತಾವು ಹಾರ್ಲೆಡೇವಿಡ್ಸನ್ ಬೈಕ್,ಬರ್ಬೊನ್ ವಿಸ್ಕಿ ಹಾಗೂ ಲೆವಿಸ್ ಜೀನ್ಸ್ ಸೇರಿದಂತೆ ಅಮೆರಿಕದ ಉತ್ಪನ್ನಗಳ ಮೇಲೆ ಹೊಸ ತೆರಿಗೆಗಳನ್ನು ವಿಧಿಸುವುದಾಗಿ ಯುರೋಪ್ ಒಕ್ಕೂಟ ಎಚ್ಚರಿಕೆ ನೀಡಿತ್ತು. ಆದರೆ ಟ್ರಂಪ್ ಶನಿವಾರ ಈ ಬಗ್ಗೆ ಟ್ವೀಟ್ ಮಾಡಿ, ‘‘ ಒಂದು ವೇಳೆ ಯುರೋಪ್ ಒಕ್ಕೂಟವು ಅಮೆರಿಕದ ಕಂಪೆನಿಗಳ ಮೇಲೆ ಅಗಾಧವಾದ ಸುಂಕ ಹಾಗೂ ನಿರ್ಬಂಧಗಳನ್ನು ವಿಧಿಸಿದಲ್ಲಿ, ನಾವು ಅಮೆರಿಕಕ್ಕೆ ಮುಕ್ತವಾಗಿ ಹರಿದುಬರುತ್ತಿರುವ ಅವರ ಕಾರುಗಳ ಮೇಲೆ ತೆರಿಗೆ ಹೇರುತ್ತೇವೆ’’ ಎಂದು ಹೇಳಿದ್ದಾರೆ.

2016ರಲ್ಲಿ ಅಮೆರಿಕವು ಯುರೋಪ್‌ನಿಂದ ಬಿಎಂಡಬ್ಲು ಹಾಗೂ ಫಾಕ್ಸ್‌ವೊಗನ್ ಬ್ರಾಂಡ್‌ಗಳಂತಹ 10.20 ಲಕ್ಷಕ್ಕೂ ಅಧಿಕ ಯುರೋಪಿಯನ್ ಕಾರುಗಳನ್ನು ಆಮದು ಮಾಡಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News