ಕದನ ವಿರಾಮಕ್ಕಾಗಿ ಸಿರಿಯದ ಮೇಲೆ ಒತ್ತಡ ಹೇರಲು ಇರಾನ್‌ಗೆ ಫ್ರಾನ್ಸ್ ಆಗ್ರಹ
ಪ್ಯಾರಿಸ್,ಮಾ.4: ಯುದ್ಧಗ್ರಸ್ತ ಸಿರಿಯದಲ್ಲಿ ಬಂಡುಕೋರರ ವಶದಲ್ಲಿರುವ ಪೂರ್ವ ಘೌಟಾ ಪ್ರಾಂತದಲ್ಲಿ ನಾಗರಿಕರ ಮೇಲೆ ಮನಬಂದಂತೆ ನಡೆಯುತ್ತಿರುವ ದಾಳಿಗಳನ್ನು ನಿಲ್ಲಿಸುವಂತೆ ಸಿರಿಯ ಸರಕಾರಕ್ಕೆ ಒತ್ತಡ ಹೇರಬೇಕೆಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೊನ್ ಅವರು ಇರಾನ್ ಅಧ್ಯಕ್ಷ ಹಸ್ಸನ್ ರೂಹಾನಿ ಅವರನ್ನು ರವಿವಾರ ಆಗ್ರಹಿಸಿದ್ದಾರೆ.
ಉಭಯ ನಾಯಕರ ನಡುವೆ ನಡೆದ ದೂರವಾಣಿ ಮಾತುಕತೆಯ ಸಂದರ್ಭದಲ್ಲಿ ಮ್ಯಾಕ್ರೊನ್ ಅವರು, ‘‘ಸಿರಿಯ ಸರಕಾರದ ಜೊತೆ ಇರಾನ್ ನಂಟು ಹೊಂದಿರುವುದರಿಂದ, ಆ ದೇಶದಲ್ಲಿ ಮಾನವೀಯ ನೆಲೆಯಲ್ಲಿ ಕದನವಿರಾಮವನ್ನು ಜಾರಿಗೊಳಿಸುವಂತೆ ಮಾಡುವಲ್ಲಿ ಟೆಹ್ರಾನ್‌ಗೆ ಹೊಣೆಗಾರಿಕೆಯಿದೆ’’ ಎಂದು ಪ್ರತಿಪಾದಿಸಿದ್ದಾರೆ.
ಸಿರಿಯ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಅವರಿಗೆ ನಿಷ್ಠವಾಗಿರುವ ಪಡೆಗಳು ಪೂರ್ವ ಘೌಟಾ ಪ್ರಾಂತದ ಕಾಲುಭಾಗದಷ್ಟು ಪ್ರದೇಶವನ್ನು ವಶಪಡಿಸಿಕೊಂಡ ಬೆನ್ನಲ್ಲೇ ಫ್ರಾನ್ಸ್ ಈ ಹೇಳಿಕೆ ನೀಡಿದೆ. ರಶ್ಯ ಬೆಂಬಲದೊಂದಿಗೆ ಸಿರಿಯ ಪಡೆಗಳು ನಡೆಸಿದ ದಾಳಿಯಲ್ಲಿ 640ಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದು, ಸಾವಿರಾರು ಮಂದಿ ಪಲಾಯನಗೈದಿರುವ ಹಿನ್ನೆಲೆಯಲ್ಲಿ ಈ ಭೀಕರ ರಕ್ತಪಾತವನ್ನು ಕೊನೆಗೊಳಿಸುವಂತೆ ಜಾಗತಿಕ ಸಮುದಾಯ ಸಿರಿಯ ಆಡಳಿತದ ಮೇಲೆ ಒತ್ತಡವನ್ನು ತೀವ್ರ ಗೊಳಿಸಿವೆ.