ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ: ತ್ರಿಕೋನ ಕ್ರಿಕೆಟ್ ಸರಣಿ ಅಬಾಧಿತ
ಕೊಲಂಬೊ, ಮಾ.6: ಸೋಮವಾರ ಕ್ಯಾಂಡಿನಗರದಲ್ಲಿ ಭುಗಿಲೆದ್ದ ಮತೀಯ ಹಿಂಸಾಚಾರ ಹಿನ್ನೆಲೆಯಲ್ಲಿ ಶ್ರೀಲಂಕಾ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟಿದ್ದರೂ ಕೊಲಂಬೊದಲ್ಲಿ ಮಂಗಳವಾರ ಭಾರತ-ಶ್ರೀಲಂಕಾ ನಡುವೆ ತ್ರಿಕೋನ ಟ್ವೆಂಟಿ-20 ಸರಣಿ ಆರಂಭಿಕ ಪಂದ್ಯ ನಿಗದಿಯಂತೆಯೇ ನಡೆಯಲಿದೆ.
ಟ್ವೆಂಟಿ-20 ಸರಣಿಯಲ್ಲಿ ಆತಿಥೇಯ ಶ್ರೀಲಂಕಾ ಹಾಗೂ ಭಾರತವಲ್ಲದೆ ಬಾಂಗ್ಲಾದೇಶ ತಂಡ ಕೂಡ ಭಾಗವಹಿಸಲಿದೆ.
ಬೌದ್ಧರು ಹಾಗೂ ಮುಸ್ಲಿಂಮರ ನಡುವೆ ಕ್ಯಾಂಡಿಯಲ್ಲಿ ಕೋಮು ಗಲಭೆ ನಡೆದ ಹಿನ್ನೆಲೆಯಲ್ಲಿ ಶ್ರೀಲಂಕಾ ಮಂಗಳವಾರ 10 ದಿನಗಳ ಕಾಲ ತುರ್ತು ಪರಿಸ್ಥಿತಿ ಘೋಷಿಸಿದೆ.
‘‘ಕೊಲಂಬೊಕ್ಕಿಂತ ಕ್ಯಾಂಡಿಯಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಸಂಬಂಧಿತ ಭದ್ರತಾ ಸಿಬ್ಬಂದಿಗಳೊಂದಿಗೆ ಮಾತನಾಡಿದ ಬಳಿಕ ಕೊಲಂಬೊದಲ್ಲಿನ ಪರಿಸ್ಥಿತಿ ಸಂಪೂರ್ಣ ಸಹಜವಾಗಿದೆ ಎನ್ನುವುದು ಗೊತ್ತಾಗಿದೆ’’ ಎಂದು ಬಿಸಿಸಿಐ ಮಾಧ್ಯಮ ಮ್ಯಾನೇಜರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ತ್ರಿಕೋನ ಸರಣಿಗೆ ತುರ್ತು ಪರಿಸ್ಥಿತಿ ಪರಿಣಾಮಬೀರದು. ಹೀಗಾಗಿ ಚಿಂತಿಸುವ ಅಗತ್ಯವಿಲ್ಲ ಎಂದು ಕೊಲಂಬೊದ ಮೂಲಗಳು ತಿಳಿಸಿವೆ.
ತ್ರಿಕೋನ ಸರಣಿಯು ಮಾ.6 ರಿಂದ 18ರ ತನಕ ಶ್ರೀಲಂಕಾದಲ್ಲಿ ನಡೆಯಲಿದೆ.