×
Ad

ತ್ರಿಕೋನ ಸರಣಿ: ಶ್ರೀಲಂಕಾ ಶುಭಾರಂಭ; ಭಾರತ ವಿರುದ್ಧ ಭರ್ಜರಿ ಜಯ

Update: 2018-03-06 22:45 IST

ಕೊಲಂಬೊ, ಮಾ.6: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕುಶಾಲ್ ಪೆರೇರ(66,37 ಎಸೆತ)ಅರ್ಧಶತಕದ ಕೊಡುಗೆಯ ಸಹಾಯದಿಂದ ಶ್ರೀಲಂಕಾ ತಂಡ ಭಾರತ ವಿರುದ್ಧದ ತ್ರಿಕೋನ ಟ್ವೆಂಟಿ-20 ಸರಣಿಯ ಮೊದಲ ಪಂದ್ಯದಲ್ಲಿ 5 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

ಇಲ್ಲಿನ ಪ್ರೇಮದಾಸ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಗೆಲ್ಲಲು 175 ರನ್ ಗುರಿ ಪಡೆದ ಶ್ರೀಲಂಕಾ 18.3 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ ಗೆಲುವಿನ ದಡ ಸೇರಿತು. ಶನಕ(ಔಟಾಗದೆ 15) ಹಾಗೂ ತಿಸಾರ ಪೆರೇರ(22)6ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 39 ರನ್ ಜೊತೆಯಾಟ ನಡೆಸಿ ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.

ಶ್ರೀಲಂಕಾ 2ನೇ ಓವರ್‌ನಲ್ಲಿ 12 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ 2ನೇ ವಿಕೆಟ್‌ಗೆ 58 ರನ್ ಸೇರಿಸಿದ ಪೆರೇರ ಹಾಗೂ ಗುಣತಿಲಕ(19)ತಂಡವನ್ನು ಆಧರಿಸಿದರು. ಪೆರೇರ 66 ರನ್(37 ಎಸೆತ, 6 ಬೌಂಡರಿ, 4 ಸಿಕ್ಸರ್)ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರಲ್ಲದೆ ತಂಡದ ಗೆಲುವಿನ ರೂವಾರಿಯಾದರು. ಭಾರತದ ಪರ ವಾಶಿಂಗ್ಟನ್ ಸುಂದರ್(2-28) ಹಾಗೂ ಯಜುವೇಂದ್ರ ಚಹಾಲ್(2-37)ತಲಾ 2 ವಿಕೆಟ್ ಪಡೆದರು.

ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ಆರಂಭಿಕ ದಾಂಡಿಗ ಶಿಖರ್ ಧವನ್ ಅರ್ಧಶತಕದ ಕೊಡುಗೆಯ ನೆರವಿನಿಂದ ಶ್ರೀಲಂಕಾ ತಂಡಕ್ಕೆ ತ್ರಿಕೋನ ಟ್ವೆಂಟಿ-20 ಸರಣಿಯ ಮೊದಲ ಪಂದ್ಯದ ಗೆಲುವಿಗೆ 175 ರನ್ ಗುರಿ ನೀಡಿತ್ತು. ಭಾರತ 5 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News