×
Ad

ಕೊಹ್ಲಿ ತಂಡಕ್ಕೆ ಸೇರಿ ವೆಂಗ್‌ಸರ್ಕಾರ್ ಉದ್ಯೋಗ ಕಳೆದುಕೊಂಡರು !

Update: 2018-03-08 19:27 IST

ಮುಂಬೈ,ಮಾ.8: ತಮಿಳುನಾಡಿನ ಬ್ಯಾಟ್ಸ್‌ಮನ್ ಎಸ್.ಬದ್ರಿನಾಥ್ ಅವರನ್ನು ಬದಿಗಿರಿಸಿ ವಿರಾಟ್ ಕೊಹ್ಲಿ ಅವರನ್ನು 2008ರಲ್ಲಿ ಟೀಮ್ ಇಂಡಿಯಾಕ್ಕೆ ಸೇರಿಸಿಕೊಳ್ಳುವ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆಯ್ಕೆ ಸಮಿತಿಯ ಮುಖ್ಯಸ್ಥ ಹುದ್ದೆಯನ್ನು ತಾನು ಕಳೆದುಕೊಳ್ಳಬೇಕಾಯಿತು ಎಂದು ದಿಲೀಪ್ ವೆಂಗ್ ಸರ್ಕಾರ್ ಅಭಿಪ್ರಾಯಪಟ್ಟರು.

ಮುಂಬೈನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಾಜಿ ನಾಯಕ ದಿಲೀಪ್ ವೆಂಗ್ ಸರ್ಕಾರ್ ಅವರು ಕೊಹ್ಲಿ 2008ರಲ್ಲಿ ಅಂಡರ್-19 ವಿಶ್ವಕಪ್ ಜಯಿಸಿದ ಭಾರತ ತಂಡದ ನಾಯಕರಾಗಿದ್ದರು. ಕೊಹ್ಲಿ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಆಸ್ಟ್ರೇಲಿಯ ಪ್ರವಾಸಕ್ಕೆ ಉದಯೋನ್ಮುಖ ಆಟಗಾರರ ತಂಡಕ್ಕೆ ಸೇರ್ಪಡೆಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಕೋಚ್ ಗ್ಯಾರಿ ಕರ್ಸ್ಟನ್ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ಒಪ್ಪಿಗೆ ಪಡೆದಿರಲಿಲ್ಲ ಎಂದು ವೆಂಗ್ ಸರ್ಕಾರ್ ಹೇಳಿದರು.

ಉದಯೋನ್ಮುಖ ಆಟಗಾರರ ಪ್ರವಾಸಕ್ಕೆ ಅಂಡರ್-23 ಆಟಗಾರರನ್ನು ಮಾತ್ರ ಆಯ್ಕೆ ಮಾಡುವ ನಿರ್ಧಾರ ಕೊಳ್ಳಲಾಗಿತ್ತು. ಈ ತಂಡದಲ್ಲಿ ವಿರಾಟ್ ಕೊಹ್ಲಿ ಅವರನ್ನು ಸೇರ್ಪಡೆಗೊಳಿಸಲಾಗಿತ್ತು. ತಾನು ಅವರ ಆಟವನ್ನು ವೀಕ್ಷಿಸಲು ಬ್ರಿಸ್ಬೇನ್‌ಗೆ ತೆರಳಿರುವುದಾಗಿ ವೆಂಗ್ ಸರ್ಕಾರ್ ಹಳೆಯ ನೆನಪುಗಳನ್ನು ಬಿಚ್ಚಿಟ್ಟರು.

‘‘ವಿರಾಟ್ ಕೊಹ್ಲಿ ಅವರು ವೆಸ್ಟ್‌ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿ ಔಟಾಗದೆ 123 ರನ್ ಗಳಿಸಿದರು. ಆಗ ನಾನು ಅವರನ್ನು ಟೀಮ್ ಇಂಡಿಯಾಕ್ಕೆ ಸೇರಿಸಿಕೊಳ್ಳುವ ಬಗ್ಗೆ ಆಲೋಚನೆ ಮಾಡಿದೆ. ಆಯ್ಕೆ ಸಮಿತಿಯ ನಾಲ್ವರು ಸದಸ್ಯರು ನನ್ನ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದರು. ಆದರೆ ನಾಯಕ ಧೋನಿ ಮತ್ತು ಕೋಚ್ ಕರ್ಸ್ಟನ್ ಅವರಿಗೆ ಕೊಹ್ಲಿ ಆಟದ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಕೊಹ್ಲಿ ಚೆನ್ನಾಗಿ ಆಡುತ್ತಾರೆ. ನಾವು ಅವರನ್ನು ಟೀಮ್ ಇಂಡಿಯಾಕ್ಕೆ ಸೇರಿಸಿಕೊಳ್ಳುವ ಎಂದು ಅವರಲ್ಲಿ ಹೇಳಿದೆ ’’ ಎಂದು ವೆಂಗ್ ಸರ್ಕಾರ್ ನೆನಪಿಸಿಕೊಂಡರು.

ಬದ್ರಿನಾಥ್ ಅವರನ್ನು ಕಡೆಗಣಿಸಿ ಕೊಹ್ಲಿ ಅವರನ್ನು ಟೀಮ್ ಇಂಡಿಯಾಕ್ಕೆ ಸೇರಿಸಿಕೊಂಡ ವಿಚಾರ ಅಂದು ಬಿಸಿಬಿಸಿ ಚರ್ಚೆಗೆ ಕಾರಣವಾಗಿತ್ತು ಎಂದು 61ರ ಹರೆಯದ ವೆಂಗ್ ಸರ್ಕಾರ್ ಹೇಳಿದರು.

ಬದ್ರಿನಾಥ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯ. ಒಂದು ವೇಳೆ ಕೊಹ್ಲಿ ತಂಡಕ್ಕೆ ಸೇರಿಕೊಂಡರೆ ಬದ್ರಿನಾಥ್ ಅವಕಾಶ ಕೈ ತಪ್ಪುತ್ತದೆ. ಎನ್.ಶ್ರೀನಿವಾಸನ್ ಆಗ ಬಿಸಿಸಿಐ ಕೋಶಾಧಿಕಾರಿಯಾಗಿದ್ದರು. ಬದ್ರಿನಾಥ್ ಅವರ ಆಟಗಾರ. ಅವರನ್ನು ಕೈ ಬಿಟ್ಟರೆ ಶ್ರೀನಿವಾಸನ್‌ಗೆ ಆಘಾತವಾಗುತ್ತದೆ ಎನ್ನುವುದು ಧೋನಿ ಮತ್ತು ಕರ್ಸ್ಟನ್ ನಿಲುವಾಗಿತ್ತು ಎಂದು ವೆಂಗ್‌ಸರ್ಕಾರ್ ವಿವರಿಸಿದರು.

‘‘ಬದ್ರಿನಾಥ್‌ರನ್ನು ಕೈ ಬಿಟ್ಟ ಹಿನ್ನೆಲೆಯಲ್ಲಿ ಶ್ರೀನಿವಾಸನ್ ಕೋಪಗೊಂಡು ಯಾವ ಕಾರಣಕ್ಕಾಗಿ ಬದ್ರಿನಾಥ್‌ರನ್ನು ಕೈ ಬಿಡಲಾಗಿದೆ ಎಂದು ನನ್ನನ್ನು ಪ್ರಶ್ನಿಸಿದರು. ನಾನು ಅವರಿಗೆ ಕೊಹ್ಲಿ ಆಟದ ಬಗ್ಗೆ ವಿವರಿಸಿದೆ. ಆದರೆ ಇದನ್ನು ಕಿವಿಗೆ ಹಾಕಿಕೊಳ್ಳದ ಶ್ರೀನಿವಾಸನ್ ಬದ್ರಿನಾಥ್ ತಮಿಳುನಾಡು ಪರ 800ಕ್ಕೂ ಅಧಿಕ ರನ್ ದಾಖಲಿಸಿದ್ದಾರೆ ಎಂದು ವಾದಿಸಿದರು. ಅವರು ಅವರ ಅವಕಾಶವನ್ನು ಪಡೆಯುತ್ತಾರೆ ಎಂದು ಹೇಳಿದೆ’’

ಇದೇ ವೇಳೆ ಬದ್ರಿನಾಥ್‌ಗೆ ಯಾವಾಗ ಅವಕಾಶ ಕೊಡುತ್ತೀರಿ ಎಂದು ಶ್ರೀನಿವಾಸನ್ ಪ್ರಶ್ನಿಸಿದರು. ‘‘ಯಾವಾಗ ಎಂದು ನನಗೆ ನಿಮ್ಮಲ್ಲಿ ಹೇಳಲು ಸಾಧ್ಯವಿಲ್ಲ ’’ ಎಂದು ಉತ್ತರಿಸಿದೆ.

‘‘ ಮರುದಿನವೇ ಶ್ರೀಕಾಂತ್‌ರನ್ನು ಕರೆದು ಶ್ರೀನಿವಾಸನ್ ಚರ್ಚಿಸಿದರು. ಆಗ ಬಿಸಿಸಿಐ ಅಧ್ಯಕ್ಷರಾಗಿದ್ದ ಶರದ್ ಪವಾರ್‌ಗೆ ಹೇಳಿ ನನ್ನನ್ನು ಆಯ್ಕೆ ಸಮಿತಿಯ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿಸಿ ಶ್ರೀಕಾಂತ್‌ಗೆ ಆಯ್ಕೆ ಸಮಿತಿಯ ಮುಖ್ಯಸ್ಥ ಹುದ್ದೆ ನೀಡಿದರು’’ ಎಂದು ವೆಂಗ್‌ಸರ್ಕಾರ್ ಹಳೆಯ ಘಟನೆಯನ್ನು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News