ಐರ್ಲೆಂಡ್ ವಿರುದ್ಧ ಗೆದ್ದ ಭಾರತಕ್ಕೆ ಐದನೇ ಸ್ಥಾನ

Update: 2018-03-10 17:53 GMT

ಇಪೋ(ಮಲೇಷ್ಯಾ), ಮಾ.10: ಸುಲ್ತಾನ್ ಅಝ್ಲಾನ್ ಶಾ ಕಪ್‌ನಲ್ಲಿ ಐದನೇ ಹಾಗೂ ಆರನೇ ಸ್ಥಾನಕ್ಕಾಗಿ ಶನಿವಾರ ನಡೆದ ಪ್ಲೇ-ಆಫ್ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಮಣಿಸಿದ ಭಾರತ ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿದೆ. ಶುಕ್ರವಾರ ನಡೆದ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಭಾರತ ತಂಡ ಐರ್ಲೆಂಡ್ ವಿರುದ್ಧ 2-3 ಅಂತರದಿಂದ ಆಘಾತಕಾರಿ ಸೋಲುನುಭವಿಸಿತ್ತು. ಈ ಸೋಲಿನಿಂದಾಗಿ ಟೂರ್ನಿಯಲ್ಲಿ ಪದಕದ ಸ್ಪರ್ಧೆಯಿಂದ ಹೊರಗುಳಿದಿತ್ತು.

ಇಂದು ಹಿರಿಯ ಮಿಡ್ ಫೀಲ್ಡರ್ ಸರ್ದಾರ್ ಸಿಂಗ್ ನೇತೃತ್ವದಲ್ಲಿ ಆಡಿದ ಭಾರತ ತಂಡ ಐರ್ಲೆಂಡ್ ತಂಡವನ್ನು 4-1 ಅಂತರದಿಂದ ಸೋಲಿಸಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಅನಾರೋಗ್ಯದ ಕಾರಣ ಐರ್ಲೆಂಡ್‌ನ ಇಬ್ಬರು ಆಟಗಾರರು ಇಂದಿನ ಪಂದ್ಯದಲ್ಲಿ ಆಡಲಿಲ್ಲ.

ಭಾರತದ ಪರ ವರುಣ್ ಕುಮಾರ್(5ನೇ ಹಾಗೂ 32ನೇ ನಿಮಿಷ)ಅವಳಿ ಗೋಲು ಬಾರಿಸಿದರು. ಶೀಲಾನಂದ ಲಾಕ್ರಾ(28ನೇ ನಿಮಿಷ) ಹಾಗೂ ಗುರ್ಜಂತ್ ಸಿಂಗ್(37ನೇ ನಿಮಿಷ) ತಲಾ ಒಂದು ಗೋಲು ಬಾರಿಸಿದರು. ಕೊನೆಯ ಕ್ಷಣದಲ್ಲಿ ಐರ್ಲೆಂಡ್‌ನ ಜುಲಿಯನ್ ಡಾಲೆ(48ನೇ ನಿಮಿಷ)ಏಕೈಕ ಗೋಲು ಬಾರಿಸಿದರು.

ಭಾರತ ಐದನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿತು. ವರುಣ್ ಕುಮಾರ್ ಟೂರ್ನಮೆಂಟ್‌ನಲ್ಲಿ ಮೊದಲ ಬಾರಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಶೀಲಾನಂದ ಅವರು 28ನೇ ನಿಮಿಷದಲ್ಲಿ ನೀಲಂ ಕ್ಸೆಸ್ ನೀಡಿದ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. ಮೊದಲಾರ್ಧದ ಅಂತ್ಯಕ್ಕೆ ಭಾರತ 2-0 ಮುನ್ನಡೆ ಸಾಧಿಸಿತು.

 ವರುಣ್ 32ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಮತ್ತೊಂದು ಗೋಲು ಬಾರಿಸಿ ಭಾರತಕ್ಕೆ 3-0 ಮುನ್ನಡೆ ಒದಗಿಸಿಕೊಟ್ಟರು. 5 ನಿಮಿಷಗಳ ಬಳಿಕ ಭಾರತದ ಮುನ್ನಡೆ 4-0ಗೆ ಏರಿಕೆಯಾಯಿತು. ಗುರ್ಜಂತ್ ಸಿಂಗ್ 37ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಐರ್ಲೆಂಡ್ ಕೊನೆಯ ಕ್ವಾರ್ಟರ್‌ನಲ್ಲಿ ಗೋಲು ಬಾರಿಸಿ ಸೋಲಿನ ಅಂತರವನ್ನು ಸ್ವಲ್ಪ ಕಡಿಮೆ ಮಾಡಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News